- ಹಿತೈಷಿ
ಹೆಣ್ಣು ಎಂದ ಮರುಕ್ಷಣ ನಮ್ಮ ಮನಸಲ್ಲಿ ಮೂಡುವ ಭಾವನೆಗೆ ಬೆಲೆಕಟ್ಟಲಾಗೀತೇ? ಆಕೆ ಮಗಳು, ತಂಗಿ, ಅಕ್ಕ, ಹೆಂಡತಿ, ತಾಯಿ ಅಷ್ಟೇ ಅಲ್ಲ ಕೊನೆಗೆ ದೇವರ ಸ್ಥಾನವನ್ನೂ ಅಲಂಕರಿಸಬಲ್ಲ ಶ್ರೇಷ್ಠ ಗುಣ ಒಬ್ಬ ಹೆಣ್ಣಿನಲ್ಲಿದೆ.
ಹುಟ್ಟುವ ಮಗು ಗಂಡಾಗಿರಬೇಕು ಎಂದು ಜಂಬ ತೋರುವ ಕೆಲವು ಕುಟುಂಬಗಳಲ್ಲಿ ಜನಿಸುವ ಹೆಣ್ಣು ಮಕ್ಕಳ ಪಾಡು ಶೋಚನೀಯ. ಆದರೆ ಎಲ್ಲಾ ನೋವನ್ನು ನುಂಗಿ ಸಾಧನೆಯ, ಸೇವೆಯ ಹದಿ ಹಿಡಿಯೋದು ತುಂಬಾ ಕಡಿಮೆ.ತನಗೆ ಬಂದ ಕಷ್ಟ ಮತ್ತೊಂದು ಹೆಣ್ಣು ಅನುಭವಿಸಬಾರದು ಎಂದು ತನ್ನ ಇಡೀ ಜೀವನವನ್ನ ಹೆಣ್ಣುಮಕ್ಕಳ ಪೋಷಣೆಗೆ ಮೀಸಲಿಟ್ಟ ತಾಯಿ ಪ್ರಕಾಶ್ ಕೌರ್.
ಈಕೆ ಪಂಜಾಬಿನ ಜಲಂಧರ್ ನವರು. ಪ್ರಕಾಶ್ ಕೌರ್ ಹೆತ್ತ ತಂದೆ-ತಾಯಿಯಿಂದಲೇ ಹೆಣ್ಣೆಂಬ ಕಾರಣಕ್ಕೆ ಮನೆಯಿಂದ ಹೊರದೂಡಲ್ಪಟ್ಟವರು. ನಂತರ 1993ರವರೆಗೆ ನಾರಿ ನಿಕೇತನದಲ್ಲಿ ಬೆಳೆದ ಇವರು, ಅದರಿಂದ ಹೊರಬಂದು ತನ್ನಂತಹ ಇತರೆ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಲು ‘ಯೂನಿಕ್ ಹೋಂ’ ಸಂಸ್ಥೆ ಸ್ಥಾಪಿಸಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು ʼತಾಯಿ ಪ್ರಕಾಶ್ ಕೌರ್ʼ.
ಯೂನಿಕ್ ಹೋಂ ನಲ್ಲಿ ಒಂಬತ್ತು ದಿನದ ಮಗುವಿನಿಂದ 19 ವರ್ಷದ ಯುವತಿಯರ ವರೆಗೂ ಸುಮಾರು 80 ಹೆಣ್ಣುಮಕ್ಕಳನ್ನು ಪೋಷಿಸಿದ್ದಾರೆ ಪ್ರಕಾಶ್. ಅಷ್ಟೇ ಅಲ್ಲ.. ತಾವು ಎತ್ತಿ ಆಡಿ ಬೆಳಸಿದ 17 ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದ್ದಾರೆ.
ಒಂದು ಕಪ್ಪು ಕವರ್ ನಲ್ಲಿ ಸುತ್ತಿ ಚರಂಡಿಯಲ್ಲಿ ಎಸೆಯಲಾಗಿದ್ದ ಸಿಯಾ ಸಿಕ್ಕಾಗ ಆಕೆ ಇನ್ನು ಹುಟ್ಟಿ ಕೆಲವೇ ಗಂಟೆಗಳಾಗಿತ್ತು. ಕಾರ್ಪುರ್ಥಲದ ಹೆದ್ದಾರಿಯಲ್ಲಿ ತನ್ನ ಪೊಷಕರು ಬಿಸಾಡಿದಾಗ ಆಕೆ ನವಜಾತ ಶಿಶುವಾಗಿದ್ದಳು. ಹುಟ್ಟಿ ಕೆಲವು ದಿನಗಳಾಗಿದ್ದ ರಜಿಯಾ ಮತ್ತು ರಬಿಯಾ ಅವರು ಜಲಂಧರ್‌ನ ಹೊರಗಿನ ಹೊಲದಲ್ಲಿ ಪತ್ತೆಯಾದರು. ಹೀಗೆ ಮನೆಯಿಂದ ಹೊರ ಹಾಕಿದ ಎಷ್ಟೋ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಕಾಣುವ ಈಕೆಯ ಪ್ರೀತಿ ಅಪಾರವಾದದ್ದು.ಒಬ್ಬ ಹೆಣ್ಣಿಗೆ ಜೀವನದಲ್ಲಿ ಬೇಕಾದ ಬೆಂಬಲ, ಶಿಕ್ಷಣ, ಕೌಶಲ್ಯಗಳನ್ನು ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುವ ವ್ಯಕ್ತಿತ್ವ ಪ್ರಕಾಶ್ ಕೌರ್ ಅವರಲ್ಲಿದೆ. ಇಂದಿಗೂ ಈ ಎಲ್ಲಾ 60 ಮಕ್ಕಳಿಗೂ ಆಕೆಯೇ ಅಡುಗೆ ಮಾಡಿ ಬಡಿಸುತ್ತಾರೆ.
ಅಷ್ಟೇ ಅಲ್ಲ ಇಲ್ಲಿರುವ ಎಲ್ಲಾ ಹೆಣ್ಣುಮಕ್ಕಳಿಗೂ ಏ.24ಕ್ಕೆ ಹುಟ್ಟು ಹಬ್ಬದ ಸಂಭ್ರಮ. ಯಾರಿಗೂ ತಮ್ಮ ಹುಟ್ಟಿದ ದಿನಾಂಕ ಗೊತ್ತಿಲ್ಲದ ಕಾರಣ ಒಂದೇ ದಿನ ಎಲ್ಲರೂ ಸಂಭ್ರಮದಿಂದ ಹುಟ್ಟು ಹಬ್ಬ ಆಚರಿಸುತ್ತಾರೆ. ಅಂದರೆ ಬರೋಬ್ಬರಿ 100 ಕೆ.ಜಿ ತೂಕದ ಕೇಕ್ ಕತ್ತರಿಸಿ,ಡಾರ್ಜಿಲಿಂಗ್ ಪ್ರವಾಸಕ್ಕೂ ಹೋಗುತ್ತಾರಂತೆ.. ಎಷ್ಟು ಚಂದ ಅಲ್ವಾ ಇವರ ಬದುಕು.
ಜೀವನದಲ್ಲಿ ನಮ್ಮವರನ್ನು ಕಳೆದುಕೊಂಡ ಬಳಿಕವೂ ಸಮಾಜಕ್ಕೆ ಸಮರ್ಪಣೆಯಾಗೋದು ಕೇವಲ ಕೆಲವು ಪುಷ್ಪಗಳು ಮಾತ್ರ ಅದರಲ್ಲಿ ಪ್ರಕಾಶ್ ಕೌರ್ ಕೂಡ ಒಬ್ಬರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ