ಶಿರಾಡಿ ಘಾಟ್ ಸಂಚಾರ ನಿಷೇಧ: ಹೆದ್ದಾರಿ ಬದಿಯಲ್ಲೇ ಠಿಕಾಣಿ ಹೂಡಿದ ವಾಹನಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ತಾಲೂಕಿನ ದೊಣಿಗಲ್ ಬಳಿ ಭೂಕುಸಿತದ ಕಾರಣಕ್ಕೆ ಹಾಸನ ಜಿಲ್ಲಾಡಳಿತ ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ಹಿನ್ನೆಲೆ ಶನಿವಾರದಂದು ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದ್ದು, ಮಂಗಳೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಸರಕು ವಾಹನಗಳು ಗುಂಡ್ಯದಲ್ಲಿ ಹೆದ್ದಾರಿಯ ಬದಿಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ.
ಗುರುವಾರದಂದು ದೋಣಿಗಲ್ ಭೂ ಕುಸಿತದಿಂದಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ದೊಣಿಗಲ್-ಹೆಗ್ಗದ್ದೆ ತನಕದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಹಗಲು ವೇಳೆಯಲ್ಲಿ ಎಲ್ಲಾ ವಾಹನಗಳಿಗೆ ಏಕಮುಖ ಸಂಚಾರ ಹಾಗೂ ರಾತ್ರಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿಯವರು ಆದೇಶಿಸಿದ್ದರು. ಆದರೆ ಶುಕ್ರವಾರದಂದು ಮತ್ತೆ ಭೂ ಕುಸಿತದ ಘಟನಾವಳಿಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮುಂದಿನ ಆದೇಶ ಬರುವ ವರೆಗೆ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ನಿಷೇಧಿಸಿ ಹೊಸದಾಗಿ ಆದೇಶ ಹೊರಡಿಸಿದ್ದರು.
ಈ ಆದೇಶದ ಅರಿವು ಹೊಂದಿರದ ಟ್ಯಾಂಕರ್ ಮತ್ತಿತರ ಸರಕು ತುಂಬಿದ ವಾಹನಗಳು ಗುಂಡ್ಯ ವರೆಗೆ ಆಗಮಿಸಿದಾಗ ಸಂಚಾರ ನಿಷೇಧದ ನಿಯಮ ಅನುಷ್ಠಾನದಿಂದಾಗಿ ಮುಂದುವರಿಯಲಾಗದೆ , ಹೆದ್ದಾರಿ ಬದಿಯಲೇ ಠಿಕಾಣಿ ಹೂಡಿವೆ.
ಇದರಿಂದಾಗಿ ಗುಂಡ್ಯದ ಮಂಗಳೂರು ಭಾಗದ ಹೆದ್ದಾರಿಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿದೆ. ಗುಂಡ್ಯದ ಹಾಸನದ ಭಾಗದಲ್ಲಿ ಯಾವುದೇ ವಾಹನಗಳು ಸಂಚರಿಸದ ಕಾರಣ ಘಾಟಿ ರಸ್ತೆಯುದ್ದಕ್ಕೂ ಬಿಕೋ ಎನ್ನುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!