ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು ಸೋಮವಾರ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಲಾರಿಯ ಇನ್ನಷ್ಟು ಭಾಗಗಳು ಪತ್ತೆಯಾಗಿವೆ.
ಮೂರನೇ ಹಂತದ ಕಾಮಗಾರಿ ನಾಲ್ಕನೇ ದಿನಕ್ಕೆ ಮುಂದುವರಿಯುತ್ತಿದ್ದಂತೆ ಗಂಗಾವಳಿ ನದಿಯಲ್ಲಿ ಕೆಲವು ಗೃಹ ಬಳಕೆಯ ವಸ್ತುಗಳು, ಹಗ್ಗದ ತುಂಡುಗಳು, ಕೇಬಲ್ ಗಳು ಪತ್ತೆಯಾದವು.
ಮದ್ಯಾಹ್ನನದ ನಂತರದ ಕಾಮಗಾರಿಯಲ್ಲಿ ಲಾರಿಯ ಹಿಂಬದಿ ಭಾಗ ನಾಲ್ಕು ಚಕ್ರಗಳ ಸಮೇತ ಪತ್ತೆಯಾಗಿದ್ದು ಕ್ರೇನ್ ಮೂಲಕ ಮೇಲೆ ಎತ್ತಲಾಗಿದೆ.
ಲಾರಿಯ ಈ ಭಾಗ ಕಳೆದ ಎರಡು ದಿನಗಳಿಂದ ಕ್ಯಾಬಿನ್, ಇಂಜಿನ್ ಮೊದಲಾದ ಭಾಗಗಳು ದೊರಕಿರುವ ಲಾರಿಯ ಭಾಗವೇ ಆಗಿದ್ದು ಇದು ಗ್ಯಾಸ್ ಟ್ಯಾಂಕರ್ ಹೊತ್ತು ಗಂಗಾವಳಿ ನದಿ ಪಾಲಾಗಿದ್ದ ಲಾರಿಯದ್ದಾಗಿರುವ ಸಾಧ್ಯತೆ ಇದೆ.
ದುರ್ಘಟನೆಯಲ್ಲಿ ಕಣ್ಮರೆಯಾಗಿರುವ ಕೇರಳದ ಭಾರತ್ ಬೆಂಜ್ ಲಾರಿ ಅದರ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ ನಾಯ್ಕ,,ಗಂಗೆಕೊಳ್ಳದ ಲೋಕೇಶ ನಾಯ್ಕ ಶೋಧ ಕಾರ್ಯ ಮುಂದುವರಿದಿದ್ದು ತಜ್ಞ ಇಂದ್ರಬಾಲನ್ ಅವರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಈ ಹಿಂದೆ ಗುರುತಿಸಿದ್ದ ಸಿ4 ಪಾಯಿಂಟ್ ನಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿದ್ದು ಇನ್ನೂ ಆರು ಪಾಯಿಂಟ್ ಗಳಲ್ಲಿ ಶೋಧ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದ್ದಾರೆ.
ಕಾರ್ಯಾಚರಣೆ ಕುರಿತು ಕೇರಳದ ಅರ್ಜುನ್ ಮತ್ತು ಕಣ್ಮರೆಯಾಗಿರುವ ಸ್ಥಳೀಯರ ಕುಟುಂಬ ವರ್ಗದವರಿಗೆ ಮನವರಿಕೆ ಮಾಡಿಕೊಡಲಾಗಿದ್ದು ತಾಳ್ಮೆಯಿಂದ ಇರುವಂತೆ ಧೈರ್ಯ ತುಂಬಲಾಗಿದೆ ಎಂದು ಶೋಧ ಕಾರ್ಯಾಚರಣೆಯ ಮುಂದಾಳತ್ವ ವಹಿಸಿರುವ ಇಂದ್ರಬಾಲನ್ ತಿಳಿಸಿದ್ದು ಗುರುತಿಸಲಾಗಿದ್ದ ಎಲ್ಲಾ ಪಾಯಿಂಟ್ ಗಳಲ್ಲಿ ಶೋಧ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ