ಹೊಸದಿಗಂತ ವರದಿ ಬೆಳಗಾವಿ:
ಬಹುಕೋಟಿ ರೂ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಶಿವಂ ಅಸೋಸಿಯೇಟ್ಸ್ ನ ಮಾಲೀಕ ಶಿವಾನಂದ ನೀಲಣ್ಣವರ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಶಿವಂ ಅಸೋಸಿಯೇಟ್ ಸಂಸ್ಥೆಯ ಮೂಲಕ ಸುಮಾರು 4,500 ಕೋಟಿ ರೂಪಾಯಿ ಹಣವನ್ನು ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಸಂಗ್ರಹಿಸಿ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ ಅವರನ್ನು ಮೇ 15ರಂದು ಮಾಳಮಾರುತಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 12ರಂದು ಶಿವಾನಂದ ನೀಲಣ್ಣವರ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅದರಂತೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ:
ಜೈಲಿನಿಂದ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ, ಶಿವಾನಂದ ನೀಲಣ್ಣವರ ಅವರು “ಓಂ ನಮಃ ಶಿವಾಯ” ಎಂದು ಮಾತ್ರ ಹೇಳಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಮುಂದಕ್ಕೆ ಸಾಗಿದರು.
ನ್ಯಾಯಾಲಯವು ಮಧ್ಯಂತರ ಜಾಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನು ವಿಧಿಸಿದೆ. ಜೂನ್ 27ರಂದು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿರುವುದರ ಜೊತೆಗೆ, ಮೂರು ಲಕ್ಷ ರೂಪಾಯಿ ಮೊತ್ತದ ಬಾಂಡ್ ಹಾಗೂ ಶೂರಿಟಿ ಸಲ್ಲಿಸುವಂತೆ ಆದೇಶಿಸಿದೆ. ಅಲ್ಲದೆ, ದೇಶವನ್ನು ತೊರೆಯದಂತೆ ನ್ಯಾಯಾಲಯವು ನಿರ್ಬಂಧ ಹೇರಿದೆ.
ಶಿವಂ ಅಸೋಸಿಯೇಟ್ ಬಹುಕೋಟಿ ವಂಚನೆ ಪ್ರಕರಣವು ರಾಜ್ಯದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಾವಿರಾರು ಹೂಡಿಕೆದಾರರು ತಮ್ಮ ಹಣ ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



