ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್, ರೈತರ ವಿಚಾರವಾಗಿ ಯಾರೇ ಹೋರಾಟ ಮಾಡಿದರೂ ಬೆಂಬಲವಿದೆ. ಶಾಸಕ ಬಸನಗೌಡ ಯತ್ನಾಳ್ ಕೂಡ ನಮ್ಮ ಪಕ್ಷದವರೇ ತಾನೇ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಒಂದು ವಾರದಿಂದ ವಕ್ಫ್ ನೋಟಿಸ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎರಡು ಹಂತದಲ್ಲಿ ಹೋರಾಟ ಮಾಡಲು ಬಿಜೆಪಿ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಅಧಿವೇಶನ ಆರಂಭದ ದಿನ ಬೆಳಗಾವಿಯಲ್ಲಿ ರೈತರ ಜೊತೆ ಹೋರಾಟ ಮಾಡುತ್ತೇವೆ. 2ನೇ ಹಂತದಲ್ಲಿ ಹೋರಾಡಲು ಮೂರು ತಂಡಗಳನ್ನು ರಚಿಸಲಾಗಿದೆ. ರೈತರ ಪರವಾಗಿ ಯಾರುಬೇಕಾದರೂ ಹೋರಾಟ ಮಾಡಬಹುದು. ಅದಕ್ಕೆ ಯಾವುದೇ ಮುಜುಗರ ಇಲ್ಲ, ನಮ್ಮ ತಕರಾರರು ಕೂಡ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದ ರೈತರ ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಸ್ಪಷ್ಟ ಉತ್ತರ ನೀಡುವವರೆಗೂ ನಮ್ಮ ಹೋರಾಟ ನಿರಂತರ. ತಂಡದಲ್ಲಿ ಎಲ್ಲ ಹಿರಿಯರು, ಶಾಸಕರು, ಕೇಂದ್ರ ಸಚಿವರು ಇರುತ್ತಾರೆ. ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು. ಬಿಜೆಪಿ ರೈತರ ವಿಚಾರದಲ್ಲಿ ಹೋರಾಟದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ನ ಘಟಾನುಘಟಿಗಳು ಸಾವಿರಾರು ಕೋಟಿ ರೂ. ಹಣ ಇಟ್ಟುಕೊಂಡು ಕಾಂಗ್ರೆಸ್ ಶಾಸಕರನ್ನೇ ಖರೀದಿಸುತ್ತಿದ್ದಾರೆಂಬ ಮಾಹಿತಿ ನಮಗೂ ಬಂದಿದೆ. ನಮಗೆ ಮಾಹಿತಿ ಬಂದಿದೆ ಅಂತಾದರೆ ಸಹಜವಾಗಿ ಸಿಎಂಗೂ ಬಂದಿರುತ್ತೆ. ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿಯ ಮೇಲೆ ಸಿಎಂ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜೀನಾಮೆ ಸನ್ನಿಹಿತವಾಗಿದೆ ಎಂದು ಸಿಎಂಗೂ ಮನವರಿಕೆಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.