ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಪಿ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರ ಬೆಂಗಾವಲು ವಾಹನ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಅಪಘಾತಕ್ಕೊಳಗಾದ (Accident) ಘಟನೆ ನಡೆದಿದೆ. ಕನಿಷ್ಠ ಆರು ವಾಹನಗಳು ಹಾನಿಗೊಳಗಾಗಿದ್ದು, ಅಖಿಲೇಶ್ ಗೆ ಗಾಯಗಳಾಗಿಲ್ಲ .
ಅಖಿಲೇಶ್ ಹರ್ದೋಯ್‌ನ ಹರ್ಪಾಲ್‌ಪುರದ ಬೈಥಾಪುರ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಫರ್ಹತ್ ನಗರ ರೈಲ್ವೆ ಕ್ರಾಸಿಂಗ್ ಬಳಿ, ತಿರುವಿನಲ್ಲಿ ವಾಹನವೊಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು ಹಿಂಬಾಲಿಸಿದ ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ.
ಅಖಿಲೇಶ್ ಯಾದವ್ ಅವರನ್ನು ಹಿಂಬಾಲಿಸಿಕೊಂಡು ಬಂದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಅವರ ಕಾರಿಗೆ ಯಾವುದೇ ಹಾನಿಯಾಗಿಲ್ಲ.
ಹಾನಿಗೊಳಗಾದ ಕಾರನ್ನು ತೋರಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ವಿಡಿಯೋಗಳಲ್ಲಿ ಕಾಣುವಂತೆ ಹಿಂದಿನಿಂದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಖಿಲೇಶ್ ಅವರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ಕರೆದೊಯ್ಯಲಾಯಿತು.
ಘಟನೆಯಲ್ಲಿ ಮುಖ್ಯ ಬೆಂಗಾವಲು ಪಡೆಯ ವಾಹನಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇನ್ಸ್‌ಪೆಕ್ಟರ್ ಶೇಷ್ನಾಥ್ ಸಿಂಗ್ ಹೇಳಿದ್ದಾರೆ.
ಅಪಘಾತದಲ್ಲಿ ಏಳಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ ಎಂದು ಹರ್ದೋಯ್ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಯಾದವ್ ತಿಳಿಸಿದ್ದಾರೆ.