SHOCKING NEWS | ಮಂಗಳೂರು ಬಳಿ ಕಡಲಿನಲ್ಲಿ ಅಪಾಯಕ್ಕೆ ಸಿಲುಕಿದ ಹಡಗು

ಹೊಸದಿಗಂತ ವರದಿ, ಮಂಗಳೂರು:

ಉಳ್ಳಾಲ ಬಳಿ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಸಂಜೆ ವೇಳೆ ಹಡಗೊಂದು ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿದ್ದ 15 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಭಾರಿ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ಸರಕು ಸಾಗಣೆಯ ನೌಕೆ ಅಪಾಯಕ್ಕೀಡಾಗಿದ್ದು, ನೌಕೆಯೊಳಗೆ ನೀರು ತುಂಬಲು ಆರಂಭವಾಗಿತ್ತು. ಎಂವಿ ಪ್ರಿನ್ಸಸ್ ಮಿರಾಲ್ ಹೆಸರಿನ ಸರಕು ನೌಕೆ ಮಂಗಳೂರು ಹಳೇ ಬಂದರಿನಿಂದ ಉಳ್ಳಾಲ ಕಡೆಗೆ 5.2 ಮೈಲಿ ದೂರದಲ್ಲಿ ಅಪಾಯಕ್ಕೆ ಸಿಲುಕಿ ಲಂಗರು ಹಾಕಿದೆ. ಈ ನೌಕೆ 8 ಸಾವಿರ ಟನ್ ಉಕ್ಕಿನ ತಂತಿ ಹೊತ್ತು ಒಮಾನ್ ನಿಂದ ಈಜಿಪ್ಟ್ ಗೆ ಸಾಗುತ್ತಿತ್ತು. ಈ ಮಧ್ಯೆ ಇಂಜಿನ್‌ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಬರಲು ಪ್ರಾರಂಭಿಸಿದೆ. ಇದನ್ನು ತುರ್ತು ದುರಸ್ತಿ ಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್ ಇಮೇಲ್ ಮೂಲಕ ಬಂದರು ಅಧಿಕಾರಿಗಳನ್ನು ಸಂಪರ್ಕಿಸಿದ್ದರು.
ಇದೇ ವೇಳೆ ಅಪಾಯದಲ್ಲಿ ನೌಕೆಯಿಂದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಸೇರಿ 15 ಮಂದಿಯನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್‌ನ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ವಿಕ್ರಮ್ ಮತ್ತು ಅಮರ್ಥ್ಯ ಹಡಗು ಮತ್ತು ಸಿಬ್ಬಂದಿ ಸಾಮರ್ಥ್ಯ ಈ ಕಾರ್ಯಾಚರಣೆ ಮೂಲಕ ಇನ್ನೊಮ್ಮೆ ರುಜುವಾತಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!