ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನರಂಜನೆಯ ವೇದಿಕೆಯಲ್ಲ, ಅದು ಮಾನವೀಯತೆಯನ್ನು ವ್ಯಕ್ತಪಡಿಸುವ ಫ್ಲ್ಯಾಟ್‌ಫಾರ್ಮ್ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ.
ಸುಡುವ ಬೇಸಿಗೆಯ ಬಿಸಿಲಿಗೆ ಮನುಷ್ಯರೇ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ, ಬಾಯಿಲ್ಲದ ಪ್ರಾಣಿಗಳ ನೋವಿಗೆ ಸ್ಪಂದಿಸಿದ ಅಂಗಡಿ ಮಾಲೀಕರೊಬ್ಬರ ಔದಾರ್ಯ ಈಗ ಎಲ್ಲರ ಮನ ಗೆಲ್ಲುತ್ತಿದೆ. ಬೀದಿ ನಾಯಿಗಳಿಗೆ ತನ್ನ ಅಂಗಡಿಯಲ್ಲೇ ಆಶ್ರಯ ನೀಡಿ, ಅವುಗಳಿಗೂ ಬದುಕುವ ಹಕ್ಕಿದೆ ಎಂದು ತೋರಿಸಿಕೊಟ್ಟಿರುವ ಆ ಮಾಲೀಕನ ವಿಡಿಯೋ ಈಗ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.
ಹೌದು, ಈ ವರ್ಷ ಬೇಸಿಗೆಯ ತಾಪ ಹೆಚ್ಚಿರುವುದರಿಂದ ಮನುಷ್ಯರೇ ಮನೆಯಿಂದ ಹೊರಬರಲು ಹೆದರಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ, ಪಕ್ಷಿಗಳು ಜೀವಿಸುವುದು ಕಷ್ಟಸಾಧ್ಯವಾಗಿದೆ. ಹೀಗಿರುವಾಗ ಅಂಗಡಿ ಮಾಲೀಕರೊಬ್ಬರು ಬೀದಿ ನಾಯಿಗಳ ಮೇಲೆ ದಯೆ ತೋರಿಸಿ ತನ್ನ ಅಂಗಡಿಯೊಳಗೆ ಅವುಗಳಿಗೆ ಆಶ್ರಯ ನೀಡಿದ್ದಾರೆ. ಮಾಲೀಕರ ಈ ನಿರ್ಧರದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೀದಿ ನಾಯಿಗಳು ಅಂಗಡಿಯ ಒಳಗೆ ಆರಾಮವಾಗಿ ಕುಳಿತಿರುವುದು ಕಾಣಬಹುದು. ಕೆಲವು ನಾಯಿಗಳು ನೆಲದ ಮೇಲೆ ಕುಳಿತಿದ್ದರೆ, ಇನ್ನೂ ಕೆಲವು ನಾಯಿಗಳು ಮೇಜಿನ ಮೇಲೆ ಮಲಗಿವೆ. ಅಂಗಡಿಯಲ್ಲಿ ಕೆಲಸ ಮಾಡುವ ಜನರು ಸಹ ನಾಯಿಗಳಿಂದ ಯಾವುದೇ ತೊಂದರೆ ಅನುಭವಿಸಿಲ್ಲ. ಆ ನಾಯಿಗಳು ಕೂಡ ತಮ್ಮಷ್ಟಕ್ಕೆ ತಾವು ಆರಾಮವಾಗಿ ಕುಳಿತಿವೆ. ಅಂಗಡಿ ಮಾಲೀಕನ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ



