ಸಿದ್ದರಾಮಯ್ಯ ತಾನು ಜೈಲಿಗೆ ಹೋಗುವುದು ತಪ್ಪಿಸಲು ಲೋಕಾಯುಕ್ತ ಮುಚ್ಚಿಹಾಕಿದರು: ನಳಿನ್‍ ಕಟೀಲ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ವಿಜಯಪುರ
ಸಿದ್ದರಾಮಯ್ಯ ತಾನು ಜೈಲಿಗೆ ಹೋಗಬಾರದೆಂದು ಲೋಕಾಯುಕ್ತವನ್ನು ಮುಚ್ಚಿಹಾಕಿದ್ದರು. ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ. ಈ ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಎಂದು ಯಾರಾದರೂ ಆಗಿದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪೇಸಿಎಂ ಎಂಬುದು ಕಾಂಗ್ರೆಸ್ ಗೆ ಅನ್ವಯಿಸುವಂತಹದ್ದು. ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್. ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ಖರ್ಗೆ, ಪರಮೇಶ್ವರ್ ಅವರಂಥ ಹಿರಿಯ ನಾಯಕರಿದ್ದರು. ದಲಿತ ಸಿಎಂ ವಿಚಾರ ಆಗ ಜೋರಾಗಿ ಚರ್ಚೆಯಲ್ಲಿತ್ತು. ಡಿ.ಕೆ.ಶಿವಕುಮಾರ್, ದೇಶಪಾಂಡೆ ಅವರಂಥ ಪ್ರಮುಖರ ಮಧ್ಯೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ ಅಂದರೆ ಅವರು ಹಣ ಕೊಟ್ಟೇ ಆಗಿದ್ದಾರೆ. 5 ವರ್ಷ ಮೇಡಂಗೆ ಹಣ ಕೊಟ್ಟೇ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐ ಗಳು ಈ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿವೆ. ಇಂದು ಈ ಸಮಸ್ಯೆ ಗಂಭೀರವಾಗಿ ಪರಿಣಮಿಸಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಟೀಕಿಸಿದರು. ಈ ದೇಶವಿರೋಧಿ ಸಂಘಟನೆಗಳ ನಿಷೇಧ ಕುರಿತಂತೆ ಅಗತ್ಯ ದಾಖಲೆ ಸಂಗ್ರಹಿಸಲಾಗುತ್ತಿದೆ. ಪೂರಕ ದಾಖಲೆಗಳು ಸಿಕ್ಕಿದರೆ ಭವಿಷ್ಯದಲ್ಲಿ ನಿಷೇಧ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಉತ್ತರಿಸಿದರು.
ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 2 ಸಾವಿರ ಜನ ಗಲಭೆಕೋರರ ಮೇಲಿದ್ದ ಕೇಸುಗಳನ್ನು ಬಿ ರಿಪೋರ್ಟ್ ಹಾಕಿ ಹಿಂದಕ್ಕೆ ಪಡೆದರು. ಗಲಭೆ, ಹತ್ಯೆ ಮಾಡಲು ದುಷ್ಕರ್ಮಿಗಳಿಗೆ ಇದು ಪ್ರೇರಣೆಯಾಯಿತು. ಅದೇ ವೇಳೆ ಮೈಸೂರು ಶಾಸಕ ಸೇಠ್ ಅವರಿಗೆ ಚೂರಿ ಇರಿತ ಆಯಿತು. ಆಗಲೂ ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಲು ಸಿದ್ದರಾಮಯ್ಯ ಹಿಂದೇಟು ಹಾಕಿದರು ಎಂದು ಆರೋಪಿಸಿದರು.
ಪಿಎಸ್‍ಐ ಹಗರಣ ಸಿದ್ದರಾಮಣ್ಣನ ಕಾಲದಲ್ಲೂ ಇತ್ತು. ಅವರು ಕ್ರಮ ಕೈಗೊಳ್ಳಲಿಲ್ಲ. ನಾವು ಡಿಐಜಿ ರ್ಯಾಂಕ್ ಅಧಿಕಾರಿಯನ್ನು ಬಂಧಿಸಿದ್ದೇವೆ. ಅವರ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಇದ್ದರೂ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ನಾವು ಕ್ರಮ ಕೈಗೊಂಡಿದ್ದೇವೆ. ಡ್ರಗ್ ಮತ್ತು ಸ್ಯಾಂಡ್ ಮಾಫಿಯಾ ಅಡಿಯಲ್ಲೇ ಕಾಂಗ್ರೆಸ್ ಬದುಕಿತ್ತು. ಇವೆರಡು ಮಾಫಿಯಾದಿಂದ ಸಿದ್ಧರಾಮಯ್ಯ ಹಣ ಸಂಗ್ರಹಿಸಿ ಮೇಡಂಗೆ ಕೊಟ್ಟಿದ್ದರು ಎಂದು ಆರೋಪಿಸಿದರು.
ಯಡಿಯೂರಪ್ಪ ಸರಕಾರ ಇದ್ದಾಗ ಡ್ರಗ್ ಮಾಫಿಯಾವನ್ನು ನಿಯಂತ್ರಿಸಲಾಯಿತು. ಪಾರದರ್ಶಕ ಮರಳು ನೀತಿಯನ್ನೂ ತರುತ್ತಿದ್ದೇವೆ. ನೀವು ಯಾವ ತನಿಖೆಯನ್ನೂ ಪಾರದರ್ಶಕವಾಗಿ ಮಾಡಲಿಲ್ಲ; ಯಾವ ಆದೇಶಗಳನ್ನೂ ಮಾಡಿಲ್ಲ. ನಮ್ಮ ಸರಕಾರ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!