ಸಿದ್ದರಾಮಯ್ಯನವರೇ, ರಾಜಕೀಯ ಲಾಭಕ್ಕೆ ಜನರ ಭಾವನೆಗಳೊಂದಿಗೆ ಚೆಲ್ಲಾಟ ಬೇಡ: ಶಿವಕುಮಾರ್ ನಾಣಯ್ಯ

ಹೊಸದಿಗಂತ ವರದಿ, ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇದ್ದ ಅಸಮಾಧಾನದಿಂದ ಪ್ರತಿಭಟನೆ ನಡೆದಿದೆಯೇ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ. ಇದನ್ನೇ ನೆಪಮಾಡಿಕೊಂಡು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಕೊಡಗಿನ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಬಾರದು ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರತಿಭಟನೆಗೂ, ಮೊಟ್ಟೆ ಎಸೆದ ಪ್ರಕರಣಕ್ಕೂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕೊಡಗನ್ನು ಲೂಟಿ ಮಾಡಿ ಲಕ್ಷಾಂತರ ಕೊಡವರನ್ನು ಕುತಂತ್ರದಿಂದ ಹತ್ಯೆ ಮಾಡಿದ ಟಿಪ್ಪುವನ್ನು ವೈಭವೀಕರಿಸಿ ರಾಜ್ಯಾದ್ಯಂತ ಆತನ ಜಯಂತಿ ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ. ಕೊಡವರು ಗೋವು ಮಾಂಸ ಸೇವಿಸುತ್ತಾರೆ ಎಂದು ಅರ್ಥವಿಲ್ಲದ ಹೇಳಿಕೆ ನೀಡಿ ನೋವುಂಟು ಮಾಡಿದ್ದಾರೆ. ಮಾಂಸಾಹಾರ ಮಾಡಿ ದೇವಸ್ಥಾನಕ್ಕೆ ಹೋಗುವ ಮೂಲಕ ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮೊಟ್ಟೆ ಎಸೆದು ಪ್ರತಿಭಟಿಸುವುದನ್ನು ಯಾವುದೇ ಹಿಂದೂ ಕಾರ್ಯಕರ್ತ ಒಪ್ಪುವುದಿಲ್ಲ. ಆದರೆ ಈ ರೀತಿಯ ತಪ್ಪುಗಳಿಗಿಂತ ದೊಡ್ಡ ತಪ್ಪು ಸಿದ್ದರಾಮಯ್ಯ ಅವರಿಂದ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಂಜಾಬಿನಲ್ಲಿ ದಿಗ್ಬಂಧನ ಹಾಕಿದ ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಎನ್ನುವುದನ್ನೇ ಮರೆತಿರುವುದು ಈ ನಾಡಿನ ದುರಂತವಾಗಿದೆ.
ಅಧಿಕಾರದ ದಾಹದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಪಕ್ಷದಲ್ಲೂ ಹಿಂದುಗಳಿದ್ದಾರೆ ಮತ್ತು ಅವರಿಗೂ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಭಾವನೆಗಳಿವೆ ಎನ್ನುವುದನ್ನು ಮರೆತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ ಅವರನ್ನು ವರ್ಗಾವಣೆ ಮಾಡಿಸಲು ಕಸರತ್ತು ನಡೆಸುತ್ತಿರುವುದು ಕೊಡಗಿನ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದವನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ ಹೊರತು ಬಿಜೆಪಿಯವರಲ್ಲ ಎನ್ನುವುದು ಸಾಬೀತಾಗಿದೆ. ಈ ಪ್ರಕರಣವನ್ನು ರಾಜಕೀಯದ ಕಣ್ಣಿನಿಂದ ನೋಡದೆ ಸಂವೇದನೆ ಮತ್ತು ಭಾವುಕತೆಯ ಒಳಗಣ್ಣಿನಿಂದ ಸಿದ್ದರಾಮಯ್ಯನವರು ವಿಮರ್ಶಿಸಿಕೊಳ್ಳಬೇಕಿದೆ. ಇಡೀ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯಲ್ಲಿ ಸಂಭ್ರಮಿಸುತ್ತಿರುವಾಗ ಸಿದ್ದರಾಮಯ್ಯ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೋ ಅಳವಡಿಸಿದ ದೇಶ ಪ್ರೇಮಿಗಳ ವಿರುದ್ಧ ಹೇಳಿಕೆ ನೀಡಿ ಭಾವನೆಗೆ ಧಕ್ಕೆ ತಂದಿದ್ದಾರೆ. ಮುಸ್ಲಿಂ ಏರಿಯಾ, ಹಿಂದೂ ಏರಿಯಾ ಎಂದು ವಿಭಜಿಸುವ ಹುನ್ನಾರ ನಡೆಸುವ ಸಣ್ಣತನ ಮತ್ತು ಮತ ತುಷ್ಟೀಕರಣದ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ.
ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ವೇದನೆ, ಸಂವೇದನೆ, ಭಾವನೆಗಳು ಇವೆ. ಕಾಂಗ್ರೆಸ್’ನಿಂದ ಜನರು ಭಾವನೆಗಳನ್ನು ನಿರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಕೊಡಗಿನ ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟಾಗಿದ್ದರೆ ಅದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಟೀಕಿಸಿರುವ ಅವರು, ಇಂದು ಬಿಜೆಪಿ ಮಾತ್ರವಲ್ಲ ಪಕ್ಷಾತೀತವಾಗಿ ಎಲ್ಲರೂ ಇವರ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!