ʻಪ್ರಜಾಧ್ವನಿ ಬಸ್ ಪಂಚರ್‌ ಆಗಿದೆʼ: ಬಿಎಸ್‌ವೈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು 

ಹೊಸದಿಗಂತ ವರದಿ ಕಲಬುರಗಿ:‌ 

ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಚರ್ ಮಾಡಿದ್ದಾರೆ. ಅದರಿಂದಲೇ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಎಸ್ವೈ ಗೆ ಟಾಂಗ್ ನೀಡಿದ್ದಾರೆ.

ಭಾನುವಾರ ಕಲಬುರಗಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಧ್ವನಿ ಬಸ್ ಪಂಚರ್ ಆಗಿದೆ ಎಂಬ ಬಿಎಸ್‌ವೈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಬಿಎಸ್‌ವೈ ಬಗ್ಗೆ ನನಗೆ ಅಪಾರವಾದ ಗೌರವ ಹಾಗೂ ಅನುಕಂಪವಿದೆ. ಆದರೆ, ಅವರನ್ನು ಬಿಜೆಪಿ ಕಡೆಗಣಿಸಿ ಮೂಲೆಗುಂಪು ಮಾಡಿದೆ ಎಂದ ಅವರು, ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಯಾರು ಸಹ ಕನಸು ಕಾಣುತ್ತಿಲ್ಲ. ನಮ್ಮ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುತ್ತೆ ಎಂದು ವಾಸ್ತವ ಸತ್ಯಾಂಶ ಹೇಳಿದ್ದೇನೆ. ಕಾಂಗ್ರೆಸ್ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ವಿರುದ್ಧ 40% ಕಮಿಷನ್ ಗಂಭೀರ ಆರೋಪವಿದೆ. ಬಿಜೆಪಿಯ ವಚನಭ್ರಷ್ಟ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಆದರಿಂದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಳೆದ 2019ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ನನ್ನ ಬಹಳ ಪ್ರಯತ್ನ ಮಾಡಿ ಸೋಲಿಸಿದರು. ಆದರೆ, ಬಾದಾಮಿಯಲ್ಲಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸಿದರು. ಈಗ 2023ಕ್ಕೆ ಬಾದಾಮಿ ಕ್ಷೇತ್ರ ಬಿಡಬೇಡಿ, ನಿಮಗೆ ಓಡಾಡೋಕ್ಕೆ ಕಷ್ಟವಾದರೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಇಂತಹ ಪ್ರೀತಿ ಯಾರಾದರೂ ಕೊಡ್ತಾರೆನ್ರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೋಲಾರದಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೋಲಾರದಲ್ಲಿ ಅಂತಹ ಯಾವುದೇ ಸರ್ವೆ ನಡೆದಿಲ್ಲ, ಅಂತೆಕಂತೆಗಳಿಗೆ ನಾನು ಉತ್ತರಿಸಲ್ಲ. ನಾನು ಕೋಲಾರದಲ್ಲಿ ಸ್ಪರ್ಧಿಸಿದರೆ 200% ಗೆಲ್ಲುವೆ. ಅಂತಿಮವಾಗಿ ನಾನು ಎಲ್ಲಿ ಸ್ಪರ್ಧಿಸಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!