ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಬಜೆಟ್ ಚರ್ಚೆ ನಡುವೆ ಮಹತ್ವದ ಹೇಳಿಕೆ ಹೊರಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಎರಡು ವರ್ಷಗಳ ಕಾಲ ಬಜೆಟ್ ಮಂಡಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ 2026-27ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕ ವಿ.ಸುನೀಲ್ಕುಮಾರ್ ಮಾತನಾಡಿ, ಬಜೆಟ್ನಲ್ಲಿ ಬಳಸಿರುವ ಹೊಸ ಆರ್ಥಿಕ ಪದಗಳು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ವ್ಯಂಗ್ಯವಾಡಿದರು. “ಮುಂದಿನ ಬಜೆಟ್ ವೇಳೆ ಶಬ್ದಕೋಶ ಕೊಡಬೇಕು” ಎಂದೂ ಟೀಕಿಸಿದರು.
ಇದನ್ನೂ ಓದಿ:
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಆ ಪದಗಳಿಗೆ ಸಚಿವ ಜಮೀರ್ ಅವರಿಂದಲೇ ಅರ್ಥ ಕೇಳಿ ಎಂದು ಹಾಸ್ಯಮಾಡಿದರು. ಈ ಸಂದರ್ಭ ಕ್ಷಣಕಾಲ ಸದನದಲ್ಲಿ ನಗು ಮೂಡಿತು.
ನಂತರ ಮಾತುಕತೆಯ ವೇಳೆ ಮುಂದಿನ ಬಜೆಟ್ ಯಾರು ಮಂಡಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್ ಖಾನ್, “ಮುಂದಿನ ಎರಡು ಬಜೆಟ್ಗಳನ್ನು ಸಹ ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ” ಎಂದು ಹೇಳಿದರು.
ಒಟ್ಟಾರೆ, ಬಜೆಟ್ ಚರ್ಚೆಯ ಮಧ್ಯೆ ನಡೆದ ಈ ಸಂಭಾಷಣೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಆಡಳಿತದ ದಿಕ್ಕು ಕುರಿತು ಕುತೂಹಲ ಹೆಚ್ಚಿಸಿದೆ.



