ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಸಿಕ್ಕಿಂನ ಯುಕ್ಸಮ್-ತಾಶಿಡಿಂಗ್ ಕ್ಷೇತ್ರದ ವ್ಯಾಪ್ತಿಗೆ ಬರುವ ರಿಂಬಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಹತ್ತಾರು ವಸತಿ ಗೃಹಗಳು ಮಣ್ಣಿನ ಪಾಲಾಗಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಡುರಾತ್ರಿ ಬಂದಪ್ಪಳಿಸಿದ ಮಣ್ಣಿನ ರಾಶಿ
ಗುರುವಾರ ತಡರಾತ್ರಿ ಇಡೀ ಗ್ರಾಮಸ್ಥರು ನಿದ್ರೆಯಲ್ಲಿದ್ದಾಗ ಬೆಟ್ಟದ ಮೇಲಿಂದ ಬೃಹತ್ ಪ್ರಮಾಣದ ಮಣ್ಣು ಮತ್ತು ಕಲ್ಲುಗಳ ರಾಶಿ ವಸತಿ ಪ್ರದೇಶದ ಕಡೆಗೆ ನುಗ್ಗಿ ಬಂದಿದೆ. ಈ ದುರಂತದ ತೀವ್ರತೆಗೆ ವಿದ್ಯುತ್ ಇಲಾಖೆಯ ಸರ್ಕಾರಿ ವಸತಿಗೃಹಗಳು ಸೇರಿದಂತೆ ಹಲವಾರು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಅದೃಷ್ಟವಶಾತ್ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಓಡಿಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚುರುಕುಗೊಂಡ ಹಾನಿ ಸಮೀಕ್ಷೆ
ಮಳೆ ನಿರಂತರವಾಗಿ ಮುಂದುವರಿದಿರುವುದರಿಂದ ಸುತ್ತಮುತ್ತಲಿನ ಮನೆಗಳು ಮತ್ತು ರಸ್ತೆ ಸಂಪರ್ಕಗಳು ತೀವ್ರ ಅಪಾಯದ ಅಂಚಿನಲ್ಲಿವೆ. ಗ್ಯಾಂಗ್ಟಾಕ್‌ನ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆಯನ್ನು ಚುರುಕುಗೊಳಿಸಿದೆ. ಶಾಸಕ ತ್ಶೆರಿಂಗ್ ಭೂಟಿಯಾ ನೇತೃತ್ವದ ತಜ್ಞ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳ ಜಂಟಿ ತಂಡವು ಲಿಂಗ್-ರಾಂಕಾ ಹೆದ್ದಾರಿ ಸೇರಿದಂತೆ ಮಣ್ಣು ಕುಸಿದಿರುವ ಹತ್ತಾರು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ರಸ್ತೆಗಳ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕ ಮೂಲಸೌಕರ್ಯಗಳ ಮರುಸ್ಥಾಪನೆಗೆ ಜಿಲ್ಲಾಡಳಿತ ಶ್ರಮಿಸುತ್ತಿದೆ.



