ಸರಳ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ಬಹುನಿರೀಕ್ಷೆಯ ಧಾರ್ಮಿಕ ಉತ್ಸವ ನಾಡಹಬ್ಬ ಉಡುಪಿ ಪರ್ಯಾಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಅತೀ ಸರಳವಾಗಿ ನಡೆಸಲು ತೀರ್ಮಾನಿಸಿರುವುದಾಗಿ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್ ಘೋಷಿಸಿದ್ದಾರೆ.

ಸಮಿತಿ ಗೌರವಾಧ್ಯಕ್ಷ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ
ಶನಿವಾರ ರಾತ್ರಿ ನಡೆದ ಶ್ರೀಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಈ ಮಹತ್ವದ ತೀರ್ಮಾನ‌ ಕೈಗೊಳ್ಳಲಾಗಿದೆ.

ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಸಂದರ್ಭದಲ್ಲಿ, ಸರಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ಣವಾಗಿ ಸಹಕರಿಸಬೇಕೆನ್ನುವ ಭಾವೀ ಪರ್ಯಾಯ ಕೃಷ್ಣಾಪುರ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯವರ ಆಶಯದಂತೆ ಜ. 17ರ ನಡುರಾತ್ರಿ ನಡೆಯಲಿರುವ (ಜ. 18ರ ನಸುಕಿನ ವೇಳೆ) ಬಹುನಿರೀಕ್ಷೆಯ ಪರ್ಯಾಯೋತ್ಸವ ಮೆರವಣಿಗೆ ಮತ್ತು ನಂತರ ರಾಜಾಂಗಣದಲ್ಲಿ ನಡೆಯಲಿರುವ ಪರ್ಯಾಯ ದರ್ಬಾರ್ ಸಭೆಯನ್ನು ತೀರಾ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ ತೀರಾ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ.

ಈ ಕಾರ್ಯಕ್ರಮಗಳನ್ನು ವಿವಿಧ ಟಿ.ವಿ. ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಆದ್ದರಿಂದ ಭಕ್ತಾದಿಗಳು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ಸಹಕರಿಸಬೇಕೆಂದು ಭಕ್ತರು ಮತ್ತು ನಾಗರಿಕರಲ್ಲಿ ನಮ್ರರಾಗಿ ವಿನಂತಿಸುತ್ತೇವೆ ಎಂದು ಶಾಸಕರು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಸಾಂಸ್ಕೃತಿಕ ತಂಡ, ಸ್ತಬ್ಧಚಿತ್ರ ರದ್ದು:
ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಉತ್ಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿದ್ದ ಜಾನಪದ ತಂಡಗಳನ್ನು ಮತ್ತು ಕೆಲವು ಟ್ಯಾಬ್ಲೋಗಳನ್ನು ರದ್ದುಪಡಿಸಿದ್ದೇವೆ. ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆಯನ್ನು ಹೊತ್ತ ವಾಹನಗಳು, ವಾದ್ಯ ಚಂಡೆ, ಡೋಲು, ಬಿರುದಾವಳಿ ಮತ್ತು ಕೇವಲ ಪೌರಾಣಿಕ ದೃಶ್ಯಾವಳಿಗಳನ್ನೊಳಗೊಂಡ ಟ್ಯಾಬ್ಲೋಗಳು ಮಾತ್ರ ಮೆರಣಿಗೆಯಲ್ಲಿ ಇರುತ್ತವೆ. ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆ ಇರುತ್ತವೆ. ಇವುಗಳನ್ನು ಜನತೆ ಅಗತ್ಯವಾಗಿ ಗಮನಿಸಬೇಕು ಎಂದು ವಿವರಿಸಿದ್ದಾರೆ.

ಎರಡು ಕೋವಿಡ್ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಉತ್ಸವದಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ವ್ಯಕ್ತಿಗತ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ಜಿಲ್ಲಾಡಳಿತದೊಂದಿಗೆ ಪೂರ್ಣ ಸಹಕರಿಸಲಿದ್ದು, ಜನತೆಯೂ ಸಹಕರಿಸಬೇಕೆಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!