ದಿಗಂತ ವರದಿ ವಿಜಯಪುರ:
ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ (55) ಹೃದಯಾಘಾತದಿಂದ ಶುಕ್ರವಾರ ತಡ ರಾತ್ರಿ ನಿಧನರಾದರು.
ಸಿಂದಗಿ ಪಟ್ಟಣದ ಪರಿಚಯಸ್ತರ ಮನೆಯಲ್ಲಿ ಮಾತನಾಡುತ್ತ ಕುಳಿತಾಗ ಶಿವಾನಂದ ಪಾಟೀಲ ಸೋಮಜ್ಯಾಳ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಇರುವಾಗಲೇ ಅಭ್ಯರ್ಥಿ ಸಾವಿಗೀಡಾಗಿದ್ದಾರೆ. ಸಿಂದಗಿ ಅಭ್ಯರ್ಥಿ ದಿಢೀರ್ ಸಾವಿನಿಂದ ಎಚ್.ಡಿ. ಕುಮಾರಸ್ವಾಮಿಗೂ ಶಾಕ್ ಆಗಿದೆ.
ಅಲ್ಲದೇ, ಹೃದಯಾಘಾತದಿಂದ ಜೆಡಿಎಸ್ ಅಭ್ಯರ್ಥಿ ನಿಧನಕ್ಕೆ ಎಚ್‌ಡಿಕೆ ಸರಣಿ ಟ್ವಿಟ್ ಮಾಡಿದ್ದಾರೆ.
ಶಿವಾನಂದ ಪಾಟೀಲ ಸೋಮಜ್ಯಾಳ ಅಕಾಲಿಕ ಮರಣ ನನಗೆ ತೀವ್ರ ಆಘಾತ ತಂದಿದೆ. ಮಾಜಿ ಯೋಧ, ಸಿಂದಗಿ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಅವರು, ಜ. 18 ರಂದು ಇಡೀ ದಿನ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು, ಬಳಿಕ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು.
ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಅವರು ಸಮಾಜಸೇವೆಯ ಅದಮ್ಯ ಹಂಬಲ ಹೊಂದಿದ್ದರು, ಪರಿಚಯವಾದ ಅಲ್ಪಕಾಲದಲ್ಲಿ ಆತ್ಮೀಯರಾಗಿದ್ದರು ಎಂದು ಟ್ವಿಟ್ ಮಾಡಿದ್ದಾರೆ.