ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್ ಸಂಸ್ಥೆಯು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಹೆಚ್ಚುವರಿ ಶೇ. 41ರಷ್ಟು ಷೇರುಗಳನ್ನು ಖರೀದಿಸುವುದಾಗಿ ಸೋಮವಾರದಂದು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಮಣಿಪಾಲ ಆಸ್ಪತ್ರೆಗಳ ಸಮೂಹದಲ್ಲಿ ಟೆಮಾಸೆಕ್ ಷೇರುಗಳ ಒಟ್ಟು ಪ್ರಮಾಣವು ಶೇ. 59ಕ್ಕೆ ಏರಿಕೆಯಾಗಲಿದೆ. ಇದು ಭಾರತದ ಆರೋಗ್ಯ ಕ್ಷೇತ್ರದಲ್ಲೇ ಅತೀ ದೊಡ್ಡ ಒಪ್ಪಂದ ಎಂದು ಪರಿಗಣಿಸಲಾಗಿದೆ.
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ದೇಶದಾದ್ಯಂತ 16 ನಗರಗಳಲ್ಲಿ ಸುಮಾರು 8,300 ಹಾಸಿಗೆ ಸಾಮರ್ಥ್ಯವಿರುವ 29 ಆಸ್ಪತ್ರೆಗಳ ಸಮೂಹವನ್ನು ಹೊಂದಿದೆ.
ಈಗ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಅವರ ಕುಟುಂಬ, ಟಿಪಿಜಿ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್)ಯಲ್ಲಿರುವ ಹೆಚ್ಚುವರಿ ಷೇರುಗಳನ್ನು ಟೆಮಾಸೆಕ್ ಖರೀದಿಸುತ್ತಿದೆ. ಈಗಾಗಲೇ ಟೆಮಾಸೆಕ್ ಸಂಸ್ಥೆಯು ಎಂಎಚ್‌ಇಯಲ್ಲಿ ಶೇ. 18ರಷ್ಟು ಷೇರುಗಳನ್ನು ಹೊಂದಿತ್ತು. ಈಗ ಮತ್ತೆ ಹೆಚ್ಚುವರಿ ಶೇ. 41 ಷೇರುಗಳ ಖರೀದಿ ಮೂಲಕ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿ ಟೆಮಾಸೆಕ್ ಹೊಂದುವ ಷೇರುಗಳ ಒಟ್ಟು ಪ್ರಮಾಣ ಶೇ. 59ಕ್ಕೆ ಏರಿಕೆಯಾಗಲಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಸಂಪೂರ್ಣ ಹಣಕಾಸು ವಿವರಗಳನ್ನು ಕಂಪೆನಿ ನೀಡಿಲ್ಲ. ಈ ಒಪ್ಪಂದದ ಬಳಿಕ ಎಂಎಚ್‌ಇಯಲ್ಲಿ ಪೈ ಕುಟುಂಬದ ಷೇರುಗಳು ಶೇ. 30ರಷ್ಟು ಇರಲಿವೆ.
ಸಂತೋಷದ ವಿಷಯ
“ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿ ಟೆಮಾಸೆಕ್ ಮಹತ್ವದ ಪಾಲನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಅದರ ಸಂಪೂರ್ಣ ಸಾಮರ್ಥ್ಯಕ್ಕೆ ವೇದಿಕೆಯನ್ನು ನಿರ್ಮಿಸುವಲ್ಲಿ ನಿರ್ವಹಣಾ ತಂಡಕ್ಕೆ ಅದರ ಬೆಂಬಲವಿದೆ” ಎಂದು ಮಣಿಪಾಲ್ ಗ್ರೂಪ್ ಅಧ್ಯಕ್ಷ ರಂಜನ್ ಪೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಗೆ ದೀರ್ಘಾವಧಿಯ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯ ಸೂಕ್ಷ್ಮತೆಯ ಅಗತ್ಯವಿರುತ್ತದೆ. ಅಂತಹ ಮೌಲ್ಯಗಳೊಂದಿಗೆ ಪ್ರತಿಧ್ವನಿಸುವ ಮತ್ತು ಮುಂದಿನ ಪ್ರಯಾಣದ ಭಾಗವಾಗಿ ಮುಂದುವರಿಯುವ ಟೆಮಾಸೆಕ್ ಮತ್ತು ಟಿಪಿಜಿಯಂತಹ ಪಾಲುದಾರರನ್ನು ನಾವು ಹೊಂದಿರುವುದು ಹರ್ಷದ ಸಂಗತಿ ಎಂದು ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಹೇಳಿದರು.
“ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲೂ ನಮ್ಮೊಂದಿಗೆ ಕೈಜೋಡಿಸಿ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಬೆಂಬಲವಾಗಿ ನಿಂತ ಎನ್‌ಐಐಎಫ್ಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.