October 27, 2026
Tuesday, October 27, 2026
spot_img

SIR 2026 | ರಾಜ್ಯದ ಅಂತಿಮ ಪಟ್ಟಿ ಪ್ರಕಟ: ಮತದಾರರ ಸಂಖ್ಯೆಯಲ್ಲಿ ಬರೋಬ್ಬರಿ 99.32 ಲಕ್ಷ ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಕ್ಷೇತ್ರವಾರು ಮತದಾರರ ಪಟ್ಟಿಗಳು ಲಭ್ಯವಿವೆ. ಪರಿಷ್ಕರಣೆಗೆ ಮೊದಲು ರಾಜ್ಯದಲ್ಲಿ 5.54 ಕೋಟಿಗೂ ಅಧಿಕ ಮತದಾರರಿದ್ದರೆ, ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ ಸುಮಾರು 4.55 ಕೋಟಿಗೆ ಇಳಿದಿದೆ. ಒಟ್ಟಾರೆ 99.32 ಲಕ್ಷಕ್ಕೂ ಹೆಚ್ಚು ಹೆಸರುಗಳಿಗೆ ಕತ್ತರಿ ಬಿದ್ದಿವೆ.

ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ ಬದಲಾವಣೆ

SIR ಪ್ರಕ್ರಿಯೆಯ ಕರಡು ಹಂತದಲ್ಲಿ ಮತದಾರರ ಸಂಖ್ಯೆ 4.46 ಕೋಟಿಗೆ ಇಳಿದಿತ್ತು. ಆಗ ಒಂದು ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಬಳಿಕ ನಡೆದ ಪರಿಶೀಲನೆ ಮತ್ತು ಸೇರ್ಪಡೆ ಪ್ರಕ್ರಿಯೆಯಿಂದ ಅಂತಿಮ ಪಟ್ಟಿಗೆ ಕರಡು ಪಟ್ಟಿಗಿಂತ 8.64 ಲಕ್ಷಕ್ಕೂ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಆದರೂ, ಪರಿಷ್ಕರಣೆಗೆ ಮುನ್ನ ಇದ್ದ ಸಂಖ್ಯೆಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಸುಮಾರು ಒಂದು ಕೋಟಿ ಮತದಾರರು ಕಡಿಮೆಯಾಗಿದ್ದಾರೆ.

ಇದನ್ನೂ ಓದಿ:

ಸ್ಥಳಾಂತರಗೊಂಡವರ ಹೆಸರುಗಳೇ ಹೆಚ್ಚು

ಕರಡು ಹಂತದಲ್ಲಿ 16.39 ಲಕ್ಷ ಹೆಸರುಗಳನ್ನು ಮೃತಪಟ್ಟ ಮತದಾರರೆಂದು ಗುರುತಿಸಿ ತೆಗೆದುಹಾಕಲಾಗಿತ್ತು. ಏಳು ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದ್ವಂದ್ವ ನಮೂದುಗಳನ್ನು ತೆರವುಗೊಳಿಸಲಾಗಿತ್ತು. ‘ಇತರೆ’ ವಿಭಾಗದಲ್ಲಿ 3.83 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಈ ವಿಭಾಗದ ವ್ಯಾಪ್ತಿಯ ಬಗ್ಗೆ ಸ್ಪಷ್ಟ ವಿವರಣೆ ಇನ್ನೂ ಲಭ್ಯವಾಗಿಲ್ಲ. ಅತಿ ಹೆಚ್ಚು, ಅಂದರೆ 80.62 ಲಕ್ಷ ಹೆಸರುಗಳನ್ನು ಸ್ಥಳಾಂತರಗೊಂಡವರು ಅಥವಾ ನೀಡಿದ ವಿಳಾಸದಲ್ಲಿ ಪತ್ತೆಯಾಗದವರು ಎಂಬ ಕಾರಣಕ್ಕೆ ತೆಗೆದುಹಾಕಲಾಗಿದೆ.

ಸೇರ್ಪಡೆ ಅರ್ಜಿ ಮತ್ತು ಅಧಿಕಾರಿಗಳ ಆಕ್ಷೇಪ

ಹೆಸರು ಮರುಸೇರ್ಪಡೆಗಾಗಿ ಫಾರ್ಮ್‌ 6 ಮೂಲಕ 7,87,534 ಅರ್ಜಿಗಳು ಬಂದಿವೆ ಎಂದು ವರದಿ ತಿಳಿಸಿದೆ. ಮತ್ತೊಂದೆಡೆ, ಚುನಾವಣಾ ಅಧಿಕಾರಿಗಳೇ ಸಲ್ಲಿಸಿದ 61,059 ಫಾರ್ಮ್‌ 7 ಅರ್ಜಿಗಳಲ್ಲಿ ಹೆಸರು ತೆಗೆದುಹಾಕುವ ಕಾರಣ ನಮೂದಿಸಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

Must Read

Skip to toolbar