ಪೂಂಚ್​​ನಲ್ಲಿ ಯೋಧರು ಹುತಾತ್ಮ: ರಂಜಾನ್​ ಹಬ್ಬದ ಸಂಭ್ರಮದಿಂದ ದೂರ ಉಳಿದ ಈ ಹಳ್ಳಿ ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಎಲ್ಲೆಡೆ ಮುಸ್ಲಿಮರು ಈದ್ ಉಲ್​ ಫಿತರ್​ ಹಬ್ಬವನ್ನು ಸಂಭ್ರಮ. ಆದ್ರೆ ಜಮ್ಮು-ಕಾಶ್ಮೀರದ ಒಂದು ಹಳ್ಳಿ ಮಾತ್ರ ಹಬ್ಬದ ಆಚರಣೆಯಿಂದ ದೂರವೇ ಉಳಿದಿದೆ.

ಹೌದು, ಏಪ್ರಿಲ್​ 21ರಂದು ಮಧ್ಯಾಹ್ನ ಪೂಂಚ್​​ನ ಭಾಟಾ ಡೋರಿಯಾ ಬಳಿಯ ದಟ್ಟ ಅರಣ್ಯದ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿ, ಐವರು ಯೋಧರು ಹುತಾತ್ಮರಾಗಿದ್ದರು. ಇದರಿಂದ ಮನನೊಂದಿರುವ ಸಾಂಗಿಯೋಟ್ ಎಂಬ ಹಳ್ಳಿಯ ಜನರು ತಾವು ಯಾವ ಕಾರಣಕ್ಕೂ ರಂಜಾನ್ ಹಬ್ಬ ಆಚರಿಸುವುದಿಲ್ಲ. ಕೇವಲ ನಮಾಜ್ ಮಾಡುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ.

ಗುರುವಾರ ಸಂಜೆ 7ಗಂಟೆ ಹೊತ್ತಿಗೆ ಸಾಂಗಿಯೋಟ್ ಗ್ರಾಮದಲ್ಲಿ ಈದ್ ಉಲ್ ಫಿತರ್​ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 4000 ಜನರು ಪಾಲ್ಗೊಳ್ಳುವವರಿದ್ದರು. ಹೀಗಾಗಿ ಅಗತ್ಯ ವಸ್ತುಗಳನ್ನು ತರುವ ಜವಾಬ್ದಾರಿಯನ್ನು ಸೇನೆಯ ರಾಷ್ಟ್ರೀಯ ರೈಫಲ್ಸ್​ ಘಟಕದವರು ಹೊತ್ತಿದ್ದರು. ಅದರಂತೆ ಬಾಲಾಕೋಟ್​​ನ ಬಸೂನಿಯಲ್ಲಿರುವ ರಾಷ್ಟ್ರೀಯ ರೈಫಲ್ಸ್​ನ ಪ್ರಧಾನ ಕಚೇರಿಯಿಂದ ಹೊರಟ ಈ ಸೇನಾ ವಾಹನ ಹಣ್ಣುಗಳು ಮತ್ತು ಇತರ ವಸ್ತುಗಳನ್ನೆಲ್ಲ ಹೊತ್ತು ಸಾಗುತ್ತಿತ್ತು. ಮಾರ್ಗಮಧ್ಯೆ ಭಿಂಬರ್​ ಗಲಿ ಎಂಬಲ್ಲಿ ಇನ್ನಷ್ಟು ವಸ್ತುಗಳನ್ನು ವಾಹನಕ್ಕೆ ತುಂಬಿಕೊಳ್ಳಬೇಕಾಗಿದ್ದರಿಂದ ಟ್ರಕ್​ನ್ನು ನಿಲ್ಲಿಸಲಾಗಿತ್ತು.
ಈ ಪ್ರದೇಶದಲ್ಲಿ ಸೇನಾ ಬೆಂಗಾವಲು ವಾಹನಗಳ ಚಲನೆ ಸದಾ ಇರುತ್ತದೆ. ಹೀಗಾಗಿ ರಾಷ್ಟ್ರೀಯ ರೈಫಲ್ಸ್​ ಸಿಬ್ಬಂದಿಯೂ ಇಲ್ಲಿ ಸಕ್ರಿಯರಾಗಿ ಉಪಸ್ಥಿತರಿರುತ್ತಾರೆ. ಇದೇ ಕಾರಣಕ್ಕೆ ತಮ್ಮ ಎಂದಿನ ಜಾಗದಲ್ಲೇ ಟ್ರಕ್​ ನಿಲ್ಲಿಸಿಕೊಂಡಿದ್ದರು. ಅಲ್ಲಿಂದ ಸಾಂಗಿಯೋಟ್ ಗ್ರಾಮ ಕೇವಲ 8ಕಿಮೀ ಅಷ್ಟೇ. ಆದರೆ ಅಲ್ಲಿಗೆ ತಲುಪುವ ಮೊದಲೇ ಆ ಟ್ರಕ್​ ಉಗ್ರರ ದಾಳಿಗೆ ಹೊತ್ತಿ ಉರಿದಿದೆ. ಹೀಗೆ ಗ್ರಾಮದಲ್ಲಿ ನಡೆಯಬೇಕಿದ್ದ ಸಂತೋಷ ಕೂಟಕ್ಕೆ ಹಣ್ಣು/ಸಿಹಿ ಇನ್ನಿತರ ವಸ್ತುಗಳನ್ನು ತರುತ್ತಿದ್ದವರು ಬಲಿಯಾದರಲ್ಲ ಎಂಬ ಕಾರಣಕ್ಕೆ ಹಳ್ಳಿಯ ಜನರು ರಂಜಾನ್​ ಆಚರಣೆಯಿಂದ ದೂರ ಸರಿದಿದ್ದಾರೆ.

ನಾವು ಶನಿವಾರ ಈದ್​ ಹಬ್ಬ ಆಚರಿಸುತ್ತಿಲ್ಲ. ನಮಾಜ್ ಮಾತ್ರ ಮಾಡುತ್ತೇವೆ ಎಂದು ಶುಕ್ರವಾರವೇ ಅಲ್ಲಿನ ಪಂಚಾಯಿತಿಯ ಸರಪಂಚ್​ ಮುಖ್ತಿಯಾಜ್​ ಖಾನ್ ಹೇಳಿದ್ದರು. ‘ಇದೀಗ ಮೃತಪಟ್ಟ ರಾಷ್ಟ್ರೀಯ ರೈಫಲ್ಸ್​​ ಘಟಕದ ಯೋಧರು ನಮ್ಮ ಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳ ರಕ್ಷಣೆಗೇ ನಿಯೋಜಿತಗೊಂಡಿದ್ದವರು. ಅವರ ಜೀವ ಹೋಗಿದ್ದು ನಮಗೆ ನೋವು ತಂದಿದೆ. ಹೀಗಾಗಿ ಹಬ್ಬ ಆಚರಣೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!