ED ಸಮನ್ಸ್‌ ಬೆನ್ನಲ್ಲೇ ಸೋನಿಯಾಗಾಂಧಿಗೆ ಕೋವಿಡ್‌ ಪಾಸಿಟಿವ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಈಡಿ ಸಮನ್ಸ್‌ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೋವಿಡ್‌ ಪಾಸಿಟಿವ್‌ ವರದಿಯಾಗಿದೆ.

ಈ ಕುರಿತು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ “ಕಳೆದ ವಾರ ಸೋನಿಯಾಗಾಂಧಿಯವರು ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಅವರು ಕೋವಿಡ್‌ ಪರೀಕ್ಷೆಗೆ ಒಳಪಟ್ಟರು. ವರದಿಯಲ್ಲಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಸ್ತುತ ಸೌಮ್ಯವಾಗಿ ರೊಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು ಅವರು ಐಸೋಲೇಟ್‌ ಆಗಿದ್ದಾರೆ” ಎಂದಿದ್ಧಾರೆ.

“ಕೆಲವು ಕಾರ್ಯಕರ್ತರಿಗೆ ಪಾಸಿಟಿವ್‌ ವರದಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ನಿನ್ನೆ ಸಂಜೆ ಸೋನಿಯಾರವರಿಗೆ ಸೌಮ್ಯ ಜ್ವರ ಕಾಣಿಸಿಕೊಂಡ ಕಾರಣ ಅವರು ಕೋವಿಡ್‌ ಪರೀಕ್ಷೆಗೊಳಪಟ್ಟರು. ಪಾಸಿಟಿವ್ ವರದಿ ಬಂದಿರುವುದರಿಂದ ಅವರು ಇತರರಿಂದ ಪ್ರತ್ಯೇಕಸಿಕೊಂಡಿದ್ದಾರೆ. ವೈದ್ಯಕೀಯ ಸಮಾಲೋಚನೆ, ಚಿಕಿತ್ಸೆಗಳು ನಡೆದಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಸುರ್ಜೇವಾಲಾ ಹೇಳಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರು ಜೂ.8ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಈಡಿ ಸಮನ್ಸ್‌ ನೀಡಿತ್ತು. ಆದರೆ ಪ್ರಸ್ತುತ ವಿದೇಶದಲ್ಲಿರುವುದರಿಂದ ರಾಹುಲ್‌ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೇಳಿದ್ದರು. ಇದೀಗ ಸೋನಿಯಾ ಗಾಂಧಿಯವರಿಗೂ ಕೋವಿಡ್‌ ಸೋಂಕು ದೃಢಪಟ್ಟಿದ್ದು ನಿಗದಿತ ದಿನಾಂಕದಂದು ವಿಚಾರಣೆ ನಡೆಯುವುದು ಅಸಾಧ್ಯವೆಂಬಂತಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!