ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯಾಂಗ ಸೇವೆಯನ್ನು ಜನರಿಗೆ ಇನ್ನಷ್ಟು ಸುಲಭವಾಗಿ ತಲುಪಿಸಲು ದಕ್ಷಿಣ ಭಾರತದಲ್ಲೇ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬೆಂಗಳೂರಿನ GKVKಯಲ್ಲಿ ನಡೆದ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆ ತಂತ್ರಜ್ಞಾನದಿಂದ ವೇಗವಾಗಿ ರೂಪಾಂತರಗೊಳ್ಳುತ್ತಿರುವ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರವಹಿಸುತ್ತಿದೆ ಎಂದರು. ಕಾನೂನು ಮತ್ತು ತಂತ್ರಜ್ಞಾನ ಈಗ ಪರಸ್ಪರ ಸಂಬಂಧ ಹೊಂದಿದ್ದು, AI ಬಳಕೆಯಿಂದ ಸಾಕ್ಷ್ಯ ವಿಶ್ಲೇಷಣೆ, ಪ್ರಕರಣ ನಿರ್ವಹಣೆ ಮತ್ತು ತೀರ್ಪು ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ:
ಆದರೆ AI ಬಳಕೆಯಿಂದ ಹೊಸ ಸವಾಲುಗಳೂ ಎದುರಾಗುತ್ತಿವೆ ಎಂದು ಎಚ್ಚರಿಸಿದರು. ಆಲ್ಗಾರಿಥಮ್‌ಗಳ ಪಕ್ಷಪಾತ ಮತ್ತು ಸ್ಪಷ್ಟತೆಯ ಕೊರತೆ ನ್ಯಾಯಾಂಗದ ಮೂಲ ತತ್ವಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಡೀಪ್‌ಫೇಕ್ ಹಾಗೂ ಕೃತಕ ಡೇಟಾ ಬಳಕೆ ನ್ಯಾಯಾಂಗದ ಮುಂದೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಹೇಳಿದರು.
ಇದೇ ವೇಳೆ ಭವಿಷ್ಯದ ನ್ಯಾಯಾಧೀಶರು ಕಾನೂನು ಜ್ಞಾನ ಜೊತೆಗೆ ತಾಂತ್ರಿಕ ಅರಿವು ಹೊಂದಿರಬೇಕೆಂದು ಸೂಚಿಸಿದರು. AI ಸರಿಯಾದ ನಿಯಂತ್ರಣದಲ್ಲಿಲ್ಲದಿದ್ದರೆ ಸಮಾಜದಲ್ಲಿ ಅಸಮಾನತೆ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲು ಮೂಲಸೌಕರ್ಯ ಅಭಿವೃದ್ಧಿ, ಖಾಲಿ ಹುದ್ದೆಗಳ ಭರ್ತಿ ಮತ್ತು ಸ್ಥಳೀಯ ಭಾಷೆಯಲ್ಲಿ ನ್ಯಾಯ ನೀಡುವಂತಹ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದರು.



