July 11, 2026
Saturday, July 11, 2026
spot_img

ಸೋಫಿ ಸ್ಟೇಡಿಯಂನಲ್ಲಿ ಸ್ಪೇನ್ ವಿಜಯಭೇರಿ: ಹದಿನಾರು ವರ್ಷಗಳ ಸುದೀರ್ಘ ಕಾಯುವಿಕೆಗೆ ಸಿಕ್ಕಿತು ಮುಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಾಸ್ ಏಂಜಲೀಸ್‌ನ ಸೋಫಿ ಸ್ಟೇಡಿಯಂನಲ್ಲಿ ನಡೆದ ರೋಚಕ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್, ಬರೋಬ್ಬರಿ 16 ವರ್ಷಗಳ ನಂತರ ಸೆಮಿಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದೆ. 2010ರ ವಿಶ್ವಕಪ್ ವಿಜಯದ ಬಳಿಕ ಸ್ಪೇನ್ ತಂಡಕ್ಕೆ ಈ ಹಂತ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಯುವ ಆಟಗಾರರ ಬಲದೊಂದಿಗೆ ಮೈದಾನಕ್ಕಿಳಿದ ತಂಡವು ತನ್ನ ಸುದೀರ್ಘ ಬರವನ್ನು ನೀಗಿಸಿಕೊಂಡಿದೆ.

ಪ್ರಥಮಾರ್ಧದ ತೀವ್ರ ಪೈಪೋಟಿ

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸ್ಪೇನ್ ಪರ 30ನೇ ನಿಮಿಷದಲ್ಲಿ ಫ್ಯಾಬಿಯನ್ ರೂಯಿಜ್ ಮೊದಲ ಗೋಲು ಬಾರಿಸಿ 1-0 ಮುನ್ನಡೆ ತಂದುಕೊಟ್ಟರು. ಆದರೆ, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ 41ನೇ ನಿಮಿಷದಲ್ಲಿ ಭರ್ಜರಿ ಗೋಲು ಗಳಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.

ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಬದಲಾವಣೆ!

ದ್ವಿತೀಯಾರ್ಧದಲ್ಲಿ ಪಂದ್ಯವು ಟ್ರೈಬ್ರೇಕರ್‌ನತ್ತ ಸಾಗುತ್ತಿದ್ದಾಗ, ಬೆಲ್ಜಿಯಂನ ಮುಖ್ಯ ಗೋಲ್‌ಕೀಪರ್ ತಿಬೌಟ್ ಕೌರ್ಟೊಯಿಸ್ ಗಾಯಗೊಂಡು ಹೊರನಡೆದರು. ಇದು ಆ ತಂಡಕ್ಕೆ ಭಾರಿ ಹೊಡೆತ ನೀಡಿತು. ಇದೇ ಸಮಯಕ್ಕೆ ಸ್ಪೇನ್ ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರು 86ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಅವರನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಿದರು.

ಮೈದಾನ ಪ್ರವೇಶಿಸಿದ ಎರಡೇ ನಿಮಿಷಗಳಲ್ಲಿ, ಬೆಲ್ಜಿಯಂನ ಬದಲಿ ಕೀಪರ್ ಸೆನ್ನೆ ಲ್ಯಾಮೆನ್ಸ್ ಮಾಡಿದ ತಪ್ಪನ್ನು ಬಳಸಿಕೊಂಡ ಮೆರಿನೊ, ಸ್ಪೇನ್ ಪರ ವಿನ್ನಿಂಗ್ ಗೋಲು ಬಾರಿಸಿ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !