ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ರೆಫರಿಗಳ ಮೋಸದಾಟ: ಭಾರತ ಹಾಕಿ ತಂಡದ ಚಿನ್ನದ ಕನಸು ಭಗ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂಗ್ಲೆಂಡ್‌ ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ನ ಹಾಕಿ ಸೆಮಿ ಫೈನಲ್‌ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಪೆನಾಲ್ಟಿ ಶೂಟ್-ಔಟ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 3-0 ಅಂತರದಿಂದ ಸೋಲಿನ ಅಘಾತಕ್ಕೀಡಾಗಿದೆ.
ಪಂದ್ಯದುದ್ದಕ್ಕೂ ಭಾರತ ಅದ್ಭುತ ಆಟವಾಡಿತ್ತು. ಬಲಿಷ್ಠ ಆಸಿಸ್‌ ತಂಡಕ್ಕೆ ಸಮಬಲದ ಪೈಪೋಟಿ ನೀಡಿತ್ತು. ಆದ್ದರಿಂದ ಪಂದ್ಯ ನಿಗದಿತ ಅವಧಿಯಲ್ಲಿ 1-1 ರಿಂದ ಸಮಬಲಗೊಂಡಿತ್ತು. ಅದ್ದರಿಂದ ಪಂದ್ಯ ಪೆನಾಲ್ಟಿ ಶೂಟೌಟ್‌ ಗೆ ಸಾಗಿದ್ದು ರೋಚಕತೆ ಮೂಡಿಸಿತ್ತು. ಆ ವೇಳೆ ರೆಫರಿಗಳ “ಪಕ್ಷಪಾತಿ ನಿರ್ಣಯʼ ಭಾರತದ ಫೈನಲ್‌ ಕನಸನ್ನು ನುಚ್ಚುನೂರು ಮಾಡಿತು. ಮೋಸದ ನಿರ್ಣಯದ ಮೂಲಕ ಭಾರತ ಚಿನ್ನದ ಪದಕಗಳಿಸುವತ್ತ ಸಾಗುವುದನ್ನು ತಡೆಯಲಾಗಿದೆ ಎಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲ ಶೂಟೌಟ್‌ ನಲ್ಲಿ ಆಸ್ಟ್ರೇಲಿಯಾದ ಮಲೋನ್ ಭಾರತದ ಗೋಲುಪೆಟ್ಟಿಗೆ ವಂಚಿಸಲು ಪ್ರಯತ್ನ ನಡೆಸಿದರು ಆದರೆ, ಭಾರತದ ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಅತ್ಯುತ್ತಮ ಸೇವ್‌ನೊಂದಿಗೆ ಆಸಿಸ್‌ ಮೊದಲ ಪ್ರಯತ್ನವನ್ನು ತಡೆದರು. ಅಲ್ಲಿಯವರೆಗೆ ಸಂಭ್ರಮದಲ್ಲಿದ್ದ ಭಾರತೀಯ ಆಟಗಾರ್ತಿಯರು ಒಮ್ಮೆಲೆ ದಿಗ್ಭ್ರಮೆಗೊಂಡರು. ಆಸಿಸ್‌ ಆಟಗಾರ್ತಿ ಪ್ರಯತ್ನ ಪ್ರಾರಂಭಿಸುವಾಗ  ಗಡಿಯಾರದ ಟೈಮರ್ ಇನ್ನೂ ಪ್ರಾರಂಭವಾಗಿರಲಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿದ ರೆಫರಿಗಳು ಆಸ್ಟ್ರೇಲಿಯಾಕ್ಕೆ ಮತ್ತೊಂದು ಅವಕಾಶ ನೀಡಿದರು. 2 ನೇ ಪ್ರಯತ್ನದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಗೋಲು ಗಳಿಸಿದರು. ಈ ಘಟನೆಯಿಂದ ಭಾರತೀಯ ಆಟಗಾರ್ತಿಯರು ಅಘಾತಕ್ಕೆ ಒಳಾಗಾದರು. ಆ ವೇಳೆ ತಂಡ ಏಕಾಗ್ರತೆ ಕಳೆದುಕೊಂಡಿದ್ದರಿಂದ ಭಾರತ ಶೂಟೌಟ್‌ ನಲ್ಲಿ ಗೋಲು ಗಳಿಸಲು ಸಾಧ್ಯವಾಗದೆ ಸೋಲೊಪ್ಪಿಕೊಳ್ಳಬೇಕಾಯಿತು.
ಭಾರತ ತಂಡದ ಕೋಚ್ ಜನ್ನೆಕೆ ಸ್ಕೋಪ್‌ಮನ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನಗಿದು ಅರ್ಥವಾಗುತ್ತಿಲ್ಲ. ಆಸ್ಟ್ರೇಲಿಯಾವು ಮೊತ್ತೊಂದು ಫೆನಾಲ್ಟಿ ನೀಡುವಂತೆ ಮನವಿ ಕೂಡಾ ಮಾಡಿಕೊಂಡಿರಲಿಲ್ಲ. ಅಧಿಕಾರಿಗಳು ನಾಟಕೀಯ ವರ್ತನೆ ತೋರಿಸಿದ್ದಾರೆ.. ಇದು ಕ್ಷಮಿಸುವಂತಹದ್ದಲ್ಲ ಎಂದು ಹೇಳಿದ್ದಾರೆ. ಶೂಟೌಟ್ ನಾಟಕದ ಮೂಲಕ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಭಾರತದಿಂದ ಚಿನ್ನದ ಪದಕವನ್ನು ಕಸಿದುಕೊಂಡಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2002ರ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಭಾರತ ಈಗ ಭಾನುವಾರದ ಕಂಚಿನ ಪದಕದ ಪ್ಲೇ-ಆಫ್‌ನಲ್ಲಿ ಕಳೆದ ಆವೃತ್ತಿಯ ವಿಜೇತ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!