ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಲೇಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ (65) ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತದಿಂದ ಶ್ರೀಗಳು ವಿಧಿವಶರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶುಗರ್, ಬಿಪಿ, ಹೃದಯ ಸಂಬಂಧಿ ಕಾಯಿಲೆಯಿಂದ ಶ್ರೀಗಳು ಬಳಲುತ್ತಿದ್ದರು. ನಿನ್ನೆ ರಾತ್ರಿ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಗೊರವಿನಕೊಳ್ಳ ಓಲೆಮಠದ ಶಾಖಾಮಠದಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಗೊರವಿನಕೊಳ್ಳದಲ್ಲಿ ಶ್ರೀಗಳ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ನಂತರ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಜಮಖಂಡಿಯ ಓಲೇಮಠದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 11 ರಿಂದ ಸಂಜೆ 5 ಗಂಟೆಗೆ ಅಂತಿಮ ದರ್ಶನಕ್ಕೆ ಅವಕಾಶ ಇದೆ.
ಸಂಜೆ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಲಿಂಗಾಯತ ಧಾರ್ಮಿಕ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ. ಐದು ಭಾಷೆಗಳಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ, ಹಂಪಿ ವಿವಿಯಲ್ಲಿ ಎಂಎ, ಪಿಹೆಚ್ಡಿ ಮುಗಿಸಿದ್ದರು. ನಾಲ್ಕು ಮಹಾಪ್ರಬಂಧ, 70ಕ್ಕೂ ಹೆಚ್ಚು ಕೃತಿಗಳ ರಚಿಸಿದ್ದರು. ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.