ಕರಕುಶಲ ವೃತ್ತಿ ತರಬೇತಿ ಸ್ಟೈಫಂಡ್ ₹ 1500 ಗೆ ಏರಿಕೆ: ಸಚಿವ ಎಂ.ಟಿ.ಬಿ. ನಾಗರಾಜ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಶಿಲ್ಪ ಕೆತ್ತನೆ ಮತ್ತು ಮರದ ಕೆತ್ತನೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಮಾಸಿಕ ಶಿಷ್ಯವೇತನವನ್ನು ಈಗಿನ ₹ 750 ರಿಂದ ₹ 1500 ಕ್ಕೆ ಹೆಚ್ಚಿಸಲಾಗುವುದು. ಕಲ್ಲು ಮತ್ತು ಮರ ಕೆತ್ತನೆ ತರಬೇತಿಯ ಮತ್ತೊಂದು ಕೇಂದ್ರವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಆರಂಭಿಸಲಾಗುವುದು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜ ತಿಳಿಸಿದರು.

ಬೆಂಗಳೂರಿನಲ್ಲಿಂದು ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಸಾಗರದಲ್ಲಿನ ‘ಶಿಲ್ಪ ಗುರುಕುಲ’ದಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ 17 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.

ಶಿಲ್ಪ ಮತ್ತು ಮರದ ಕೆತ್ತನೆಗೆ ಬಹುಬೇಡಿಕೆ ಇರುವುದರಿಂದ ಮತ್ತಷ್ಟು ಅಭ್ಯರ್ಥಿಗಳಿಗೆ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಕರಕುಶಲಕರ್ಮಿಗಳಿಗೆ ಸರಕಾರ ನೀಡುತ್ತಿರುವ ಆರ್ಥಿಕ ನೆರವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಸಚಿವ ಎಂ.ಟಿ.ಬಿ. ನಾಗರಾಜು ಭರವಸೆ ನೀಡಿದರು.

ಮಹಿಳೆಯರು ಸಹ ಕರಕುಶಲ ತರಬೇತಿ ಪಡೆಯುಲು ಆಸಕ್ತಿ ತೋರಿಸಬೇಕು. ಸಾಗರ ತರಬೇತಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ಸದ್ಯದಲ್ಲಿಯೇ ಸಭೆ ನಡೆಸಿ ಬಗೆಹರಿಸಿ, ಕೇಂದ್ರವನ್ನು ಸುಸಜ್ಜಿತಗೊಳಿಲಾಗುವುದು ಎಂದು ಸಚಿವರು ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಮಾತನಾಡಿ, ನಿಗಮವು ಬಿದರಿ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡಲು ಬೀದರ್‌ನಲ್ಲಿ ಕಲಾಸಂಕೀರ್ಣ ನಿರ್ಮಿಸುತ್ತಿದೆ. ಸಾಗರ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಂದ ಕರಕುಶಲ ವಸ್ತುಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ರ‍್ಯಾಂಕ್ ವಿಜೇತರು
ಕಲ್ಲು ಕೆತ್ತನೆ ವಿಭಾಗ: ಸುದರ್ಶನ ಆಚಾರ್ಯ – ಮೊದಲ ರ‍್ಯಾಂಕ್, ಪ್ರಭಾಕರ್ – ಎರಡನೇ ರ‍್ಯಾಂಕ್, ಮೌನೀಶ್ ಕುಮಾರ್ – ಮೂರನೇ ರ‍್ಯಾಂಕ್. ಮರದ ಕೆತ್ತನೆ ವಿಭಾಗ: ಎಂ. ಚಂದನ್ – ಮೊದಲ ರ‍್ಯಾಂಕ್, ಮಹೇಶ್ – ಎರಡನೇ ರ‍್ಯಾಂಕ್, ಅನಿಲ್ ನಾಯಕ್ – ಮೂರನೇ ರ‍್ಯಾಂಕ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!