ಹೊಸದಿಗಂತ ವರದಿ,ಶಿವಮೊಗ್ಗ:
ವಮೊಗ್ಗ: ಈದ್ ಮಿಲಾದ್ ಅಂಗವಾಗಿ ನಗರದ ರಾಗಿಗುಡ್ಡದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಕಟೌಟ್‌ನ ಹಿಂಸಾತ್ಮಕ ದೃಶ್ಯದಿಂದಾಗಿ ಭಾನುವಾರ ಬೆಳಗ್ಗೆಯಿಂದಲೇ ಹೊಗೆಯಾಡುತ್ತಿದ್ದ ವಿವಾದ ಸಂಜೆ ವೇಳೆಗೆ ಸ್ಪೋಟಗೊಂಡು ಇಡೀ ಬಡಾವಣೆಗೆ ಪ್ರಕ್ಷುಬ್ದಗೊಂಡು ನಿಷೇಧಾಜ್ಞೆ (ಕಲಂ144)ಜಾರಿ ಮಾಡಲಾಗಿದೆ.
ಟಿಪ್ಪು ಕಟೌಟ್‌ನ ಕಾಲಿನ ಬಳಿ ಪೊಲೀಸರು ಬಿಳಿ ಬಣ್ಣ ಹೊಡೆಸಿದ್ದಾರೆಂಬ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಕೆಲವರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದು ಪ್ರತಿಭಟನೆ ನಡೆಸಿದ್ದರು. ಆ ಕ್ಷಣಕ್ಕೆ ಪರಿಸ್ಥಿತಿಯನ್ನು ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಶಮನ ಮಾಡಲಾಗಿತ್ತು.
ಆದರೆ ಸಂಜೆ ಈದ್ ಮಿಲಾದ್ ಮೆರವಣಿಗೆ ಸಾಗುತ್ತಿದ್ದಂತೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇದರಿಂದಾಗಿ ಮನೆಗಳ ಕಿಟಕಿ,ಕಾರು, ಬೈಕ್‌ಗಳ ಗಾಜು ಪುಡಿಯಾಗಿವೆ. ಮೂರ್ನಾಲ್ಕು ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಸ್ಥಳಕ್ಕೆ ತೆರಳಿ ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದರು. ತಕ್ಷಣವೇ rapid ಆ್ಯಕ್ಸನ್ ಫೋರ್ಸ್, ಕೆಎಸ್‌ಆರ್‌ಪಿ ಹೆಚ್ಚುವರಿ ತುಕಡಿಯನ್ನ ನಿಯೋಜನೆ ಮಾಡಿ ಇಡೀ ರಾಗಿಗುಡ್ಡ ಪ್ರದೇಶವನ್ನು ಸುಪರ್ದಿಗೆ ಪಡೆಯಲಾಗಿತ್ತು.
ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು ಸುಮಾರು 40 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ವಶಕ್ಕೆ ಪಡೆದರು. ತಕ್ಷಣವೇ ನಿಷೇಧಾಜ್ಞೆ ಜಾರಿಗೊಳಿಸಿ, ಗುಂಪು ಸೇರುವುದು, ಸಭೆ ಸಮಾರಂಭ, ಮೆರವಣಿಗೆಯನ್ನು ರದ್ದುಪಡಿಸಿದರು. ಹೊರಗಿನನವರು ಬಡಾವಣೆ ಒಳಗೆ ಬರದಂತೆ ನಾಕಾಬಂದಿ ಮಾಡಲಾಗಿದ್ದು, ಸ್ಥಳೀಯರು ಮನೆಗಳಿಗೆ ತೆರಳಲು ಅವಕಾಶ ನೀಡಲಾಯಿತು. ತಾಲೂಕು ದಂಡಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಮಾಡಿದ್ದಾರೆ.