ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಗೆ ದಶಕಗಳಿಂದ ಕಂಟಕವಾಗಿದ್ದ ಪೇಪರ್ ಸೋರಿಕೆ ಮಾಫಿಯಾವನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಈ ಕಠಿಣ ಕಾನೂನು ಅತ್ಯಗತ್ಯವಾಗಿತ್ತು ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026’ ಯಶಸ್ವಿಯಾಗಿ ಅಂಗೀಕಾರಗೊಂಡಿರುವುದನ್ನು ಹೊಗಳಿದ ಪ್ರಧಾನಿ, ದೇಶಾದ್ಯಂತ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದಿದ್ದಾರೆ.
ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಪರೀಕ್ಷಾ ವ್ಯವಸ್ಥೆ ನಿರ್ಮಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಲವು ವರ್ಷಗಳಿಂದ ದೇಶದಾದ್ಯಂತ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆಗೆ ಕಾನೂನು ಮೂಲಕ ಕಠಿಣ ಕಡಿವಾಣ ಹಾಕುವ ಮಹತ್ವದ ಹೆಜ್ಜೆ ಇದಾಗಿದೆ ಎಂದು ತಿಳಿಸಿದ್ದಾರೆ.
ಸ್ನೇಹಿತರೇ, ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ನಿರ್ಮಿಸಲು ನಾವು ಒಂದೊಂದೇ ಹೆಜ್ಜೆ ಇಡುತ್ತಿದ್ದೇವೆ. ವಿಶೇಷ ಕಾರ್ಯಪಡೆ ರಚನೆ, ತ್ವರಿತ ನ್ಯಾಯಾಲಯಗಳ ಸ್ಥಾಪನೆ, ರಾಜ್ಯಗಳ ಸಲಹೆಗಳನ್ನು ಪಡೆದು ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ.ಹಲವು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಕೇವಲ ಕೇಂದ್ರ ಸರ್ಕಾರಕ್ಕಷ್ಟೇ ಅಲ್ಲ, ಅನೇಕ ರಾಜ್ಯಗಳಿಗೂ ದೊಡ್ಡ ಸವಾಲಾಗಿತ್ತು. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯವಾಗಿತ್ತು. ಸಂಸತ್ತಿನಲ್ಲಿ ಬಲಿಷ್ಠ ಪೇಪರ್ ಲೀಕ್ ವಿರೋಧಿ ಮಸೂದೆಯನ್ನು ತರಲಾಗುವುದು ಎಂದು ನೀಡಿದ್ದ ಭರವಸೆಯನ್ನು ಸರ್ಕಾರ ಈಗ ಈಡೇರಿಸಿದೆ ಎಂದಿದ್ದಾರೆ.



