ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಕಟ್ಟುನಿಟ್ಟಿನ ಅನುಷ್ಠಾನ: ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಖಡಕ್ ಸೂಚನೆ

ಹೊಸದಿಗಂತ, ಚಿತ್ರದುರ್ಗ:
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಂತೆ ಜಿಲ್ಲೆಯಾದ್ಯಂತ ಕನ್ನಡ ಭಾಷೆಯ ವ್ಯಾಪಕ ಬಳಕೆ ಹಾಗೂ ಶೇ.೬೦ರಷ್ಟು ಕನ್ನಡ ಭಾಷೆಯನ್ನು ನಾಮಫಲಕಗಳ ಮೇಲ್ಭಾಗದಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಕನ್ನಡವನ್ನು ಅನುಷ್ಠಾನಗೊಳಿಸಲು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು ಅಥವಾ ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು, ಮತ್ತು ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ಪ್ರಮುಖವಾಗಿ ಶೇ.೬೦ರಷ್ಟು ಕನ್ನಡದಲ್ಲಿ ಇರಬೇಕು ಎಂದರು.
ಕಾರ್ಯಕ್ರಮಗಳ ಕುರಿತ ಕರಪತ್ರ, ಬ್ಯಾನರು, ಪ್ಲೆಕ್ಸು, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿಗಳು, ನೋಟೀಸುಗಳು ಕನ್ನಡದಲ್ಲಿ ತರತಕ್ಕದ್ದು. ಸರ್ಕಾರವು ಕೈಗೊಂಡಂತಹ, ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಬಿಲ್ಲು, ನೋಟಿಸುಗಳು ಕನ್ನಡದಲ್ಲಿ ಇರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!