ಈಡಿಗ ನಿಗಮ ಮಂಡಳಿ ರಚನೆಯಾಗುವವರೆಗೆ ಹೋರಾಟ ನಿಲ್ಲದು: ಡಾ. ಪ್ರಣವಾನಂದ ಶ್ರೀ ಎಚ್ಚರಿಕೆ

ಹೊಸ ದಿಗಂತ ವರದಿ: ಅಂಕೋಲಾ :

ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗರ ಬಗ್ಗೆ ಸರಕಾರ ಹಗುರವಾಗಿ ತೆಗೆದುಕೊಂಡಿದೆ. ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈಡಿಗ ಜನಾಂಗಕ್ಕೆ ನಾರಾಯಣಗುರು ನಿಗಮ ಮಂಡಳಿ ರಚಿಸಿ 500 ಕೋಟಿ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಂಡ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಡಿಗ ಸಮುದಾಯಕ್ಕೆ ಸೇರಿದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲಕುಮಾರ ಹಾಗೂ ಶಾಸಕರು ವಿಧಾನಸಭೆಯಲ್ಲಿ ನಮ್ಮ ಸಮಾಜದ ಬಗ್ಗೆ ಒಂದೇ ಒಂದು ಧ್ವನಿ ಎತ್ತುತ್ತಿಲ್ಲ. ನಿಗಮ ಮಂಡಳಿ ರಚಿಸುವ ಕುರಿತು ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಜಾರಿಗೆ ತರಲು ವಿಫಲರಾಗಿದ್ದು, ಇವರು ರಾಜೀನಾಮೆ ನೀಡಲಿ ಎಂದರು.
ಈಡಿಗ ಸಮುದಾಯದ ಕುಲಕಸುಬಾಗಿರುವ ಶೇಂದಿಗೆ ರಾಜ್ಯಾದ್ಯಂತ ಅವಕಾಶ ಕಲ್ಪಿಸಬೇಕು. ಶೇಂದಿ ಕೇವಲ ಕುಡಿಯುವುದಕ್ಕಷ್ಟೇ ಸೀಮಿತವಾದದ್ದಲ್ಲ. ಇದರಿಂದ ಬೆಲ್ಲ, ಸಕ್ಕರೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತದೆ. ಇನ್ನು ಶೇಂದಿಯಿಂದ ಸಿದ್ಧವಾದ ಬೆಲ್ಲ ಮತ್ತು ಸಕ್ಕರೆ ಹಲವಾರು ಸಿಹಿ ತಿನಿಸುಗಳಿಗೆ ಬಳಕೆಯಾಗುತ್ತದೆ. ಹಾಗೇ ಬುಡಕಟ್ಟು ಸಮಾಜದಲ್ಲಿ ಗುರುತಿಸಿಕೊಂಡಿರುವ ಈಡಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನೆವರಿ ೬ರಿಂದ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ.

ಫೆ. 14ರಿಂದ ಬೇಡಿಕೆ ಈಡೇರುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ ಎಂದರು.
ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ ಮಾತನಾಡಿ, ನಮ್ಮ ಸಮಾಜದ ಅಭಿವೃದ್ಧಿಗಾಗಿ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ನಮ್ಮ ಸಮುದಾಯಕ್ಕೆ ನಿಗಮ ಮಂಡಳಿಯ ಅಗತ್ಯತೆಯಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮಾಸ್ತಿಹಳ್ಳ, ರಾಜ್ಯ ಕಾರ್ಯದರ್ಶಿ ಸಚಿನ ನಾಯ್ಕ, ಜಿಲ್ಲಾಧ್ಯಕ್ಷ ಉಲ್ಲಾಸ ನಾಯ್ಕ ಇತರರಿದ್ದರು. ಈ ಸಂದರ್ಭ ‘ಈಡಿಗರು ಮತ್ತು ಶೇಂದಿ’ ಕಿರು ಹೊತ್ತಿಗೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಶ್ರೀ ನಾರಾಯಣಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿದರು. ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ. ನಾಯ್ಕ ಕೃತಿ ಪರಿಚಯಿಸಿದರು. ಮಂಜುನಾಥ ಕೃಷ್ಣ ನಾಯ್ಕ , ರಾಜೇಶ ಮಿತ್ರಾ ನಾಯ್ಕ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!