September 30, 2026
Wednesday, September 30, 2026
spot_img

ವಿದ್ಯಾರ್ಥಿಗಳಿಗೆ ನ್ಯಾಯ ಬೇಕು: ಪ್ರತಿಭಟನೆ ಬೆನ್ನಲ್ಲೇ ಜನ್ಮದಿನ ಆಚರಿಸಲು ನಿರಾಕರಿಸಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವ ಬದಲು ಬಲಪ್ರಯೋಗ ನಡೆಸಿರುವುದು ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

‘ಇದು ಸಂಭ್ರಮದ ದಿನವಲ್ಲ’

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಖರ್ಗೆ, ದೇಶದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಭ್ರಮ ಆಚರಿಸುವ ಬದಲು ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನಿಸುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಹಲವು ಪ್ರಶ್ನೆಗಳು

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಲಾಠಿಚಾರ್ಜ್, ಅಶ್ರುವಾಯು ಬಳಕೆ, ಸಂಸತ್ ಪ್ರದೇಶದಲ್ಲಿ ನಿರ್ಬಂಧ ಹಾಗೂ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿರುವ ಕುರಿತು ಸರ್ಕಾರ ಉತ್ತರ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಸಂಸತ್‌ನಲ್ಲಿ ಚರ್ಚೆ, ಸಚಿವರ ರಾಜೀನಾಮೆಗೆ ಒತ್ತಾಯ

ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳ ಕುರಿತು ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ಕೇಂದ್ರಿತ ಪರೀಕ್ಷಾ ವ್ಯವಸ್ಥೆಗೆ ಆಗ್ರಹ

ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಯಾಗಬೇಕು ಎಂದು ಖರ್ಗೆ ತಿಳಿಸಿದ್ದಾರೆ. ಪರೀಕ್ಷಾ ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಮರುಪರೀಕ್ಷೆ ಮತ್ತು ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Must Read