September 29, 2026
Tuesday, September 29, 2026
spot_img

ರಕ್ಷಣಾ ಪಡೆಗಳ ಯಶಸ್ವಿ ಕಾರ್ಯಾಚರಣೆ: ಉತ್ತರಕಾಶಿ ಹಿಮಪಾತದಲ್ಲಿ ಸಿಲುಕಿದ್ದ 19 ಚಾರಣಿಗರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಕಾಶಿಯಲ್ಲಿಸತತವಾಗಿ ಸುರಿಯುತ್ತಿರುವ ಹಿಮಪಾತ ನಡುವೆಯೇ ಉತ್ತರಾಖಂಡದ ಕಾಳಿಂದಿ ಖಾಲ್ ಚಾರಣ ಮಾರ್ಗದಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ 19 ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ರಾಜ್ಯ ವಿಪತ್ತು ಸ್ಪಂದನಾ ಪಡೆಯ (SDRF) ಕಮಾಂಡೆಂಟ್ ಅರ್ಪಣ್ ಯದುವಂಶಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ಅವರ ಉಸ್ತುವಾರಿಯಲ್ಲಿ ನಡೆದ ಈ ಜಂಟಿ ಕಾರ್ಯಾಚರಣೆಯು ಯಶಸ್ವಿಯಾಗಿದೆ.

ಹಿಮಪಾತದ ನಡುವೆಯೇ ಕಾರ್ಯಾಚರಣೆ

ಕಾಳಿಂದಿ ಖಾಲ್‌ನ ಕಡಿದಾದ ಮತ್ತು ಎತ್ತರದ ಹಿಮಾವೃತ ಪ್ರದೇಶದಲ್ಲಿ ಸಿಲುಕಿದ್ದ ಚಾರಣಿಗರನ್ನು ಎಸ್‌ಡಿಆರ್‌ಎಫ್‌ನ ವಿಶೇಷ ಹೈ-ಆಲ್ಟಿಟ್ಯೂಡ್ ರಕ್ಷಣಾ ತಂಡವು ಪತ್ತೆಹಚ್ಚಿ, ಹಾರ್ಸಿಲ್‌ಗೆ ಯಶಸ್ವಿಯಾಗಿ ಕರೆತಂದಿದೆ.

ಸತತವಾಗಿ ಸುರಿಯುತ್ತಿದ್ದ ಮಳೆ ಮತ್ತು ಭಾರೀ ಹಿಮಪಾತದಿಂದಾಗಿ ಹೆಲಿಕಾಪ್ಟರ್ ಹಾರಾಟಕ್ಕೆ ತೀವ್ರ ಅಡ್ಡಿಯಾಗಿತ್ತು. ಆದರೆ, ವಾತಾವರಣ ಸ್ವಲ್ಪ ತಿಳಿಯಾಗುತ್ತಿದ್ದಂತೆ ಸತತ ಎರಡನೇ ದಿನವೂ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿ ಎಲ್ಲರನ್ನೂ ರಕ್ಷಿಸಲಾಗಿದೆ.

ಇದನ್ನೂ ಓದಿ:

ಕೇದಾರನಾಥ ಮಾರ್ಗದಲ್ಲಿ ಭೂಕುಸಿತ

ಭಾನುವಾರ ತಡರಾತ್ರಿ ಕೇದಾರನಾಥ ಮಾರ್ಗದ ಚಿರ್‌ಬಾಸಾ ಬಳಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಿಲುಕಿಕೊಂಡಿದ್ದ ಸುಮಾರು 1,500 ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಣಾ ಪಡೆಗಳು ರಕ್ಷಿಸಿದ್ದಾರೆ.

ಚಿರ್‌ಬಾಸಾ ಹೆಲಿಪ್ಯಾಡ್ ಬಳಿ ಬೆಟ್ಟದಿಂದ ನಿರಂತರವಾಗಿ ಕಲ್ಲುಗಳು ಉರುಳಿ ಬೀಳುತ್ತಿದ್ದವು. ಇದರಿಂದ ಯಾತ್ರಾರ್ಥಿಗಳು ಭಯಭೀತರಾಗಿದ್ದರು. ಜೀವದ ಹಂಗು ತೊರೆದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಜಿಲ್ಲಾ ವಿಪತ್ತು ಪಡೆಗಳು ಕತ್ತಲಲ್ಲೇ ಕಾರ್ಯಾಚರಣೆ ನಡೆಸಿ, ಪ್ರತಿಯೊಬ್ಬ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಗೌರಿಕುಂಡ್‌ಗೆ ತಲುಪಿಸಿದ್ದಾರೆ.

Must Read