ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಕ್ಕರೆ ರಫ್ತು ನಿಷೇಧವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅಕ್ಟೋಬರ್ 31, 2023 ರವರೆಗೆ ಈ ನಿಷೇಧ ಮುಂದುವರಿಯುತ್ತದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕರು ಅಧಿಸೂಚನೆ ಹೊರಡಿಸಿದ್ದಾರೆ. 2022ರ ಜೂನ್ 1ರಿಂದ ಅಕ್ಟೋಬರ್ 31ರವರೆಗೆ ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು ಗೊತ್ತೇ ಇದೆ. ಇನ್ನೆರಡು ದಿನಗಳಲ್ಲಿ ಈ ಗಡುವು ಮುಗಿಯಲಿರುವುದರಿಂದ ನಿಷೇಧವನ್ನು ಇನ್ನು ಒಂದು ವರ್ಷ ವಿಸ್ತರಿಸಲು ನಿರ್ಧರಿಸಲಾಗಿದೆ.
ನಿಷೇಧ ಮುಂದುವರಿದರೂ, CXL ಮತ್ತು TRQ ಕೋಟಾದ ಅಡಿಯಲ್ಲಿ ದೇಶದಿಂದ ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ಗೆ ಸಕ್ಕರೆ ರಫ್ತಾಗುತ್ತದೆ. ಸಕ್ಕರೆ ರಫ್ತಿಗೆ ತೆಗೆದುಕೊಳ್ಳಬೇಕಾದ ಕಡ್ಡಾಯ ಅನುಮತಿಗಳ ಕುರಿತ ನಿಯಮಾವಳಿಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ಅಧಿಸೂಚನೆಯಲ್ಲಿ ವಿವರಿಸಿದ್ದಾರೆ.
ದೇಶದಲ್ಲಿ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ. ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದರು.