ಹೊಸದಿಗಂತ ವರದಿ ಹುಬ್ಬಳ್ಳಿ:
ರೈತರು ಹೋರಾಟದಿಂದ ಹಿಂದೆ ಸರಿಯಬೇಕು. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸಿದ್ಧವಿದೆ. ರೈತ ನಾಯಕರು ಮತ್ತೆ ಚರ್ಚೆಗೆ ಬಂದರೆ ಮಾತುಕತೆಗೆ ನಾವು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಂದ ದೇಶ ಆರ್ಥಿಕತೆ ಬಲಗೊಳ್ಳಲಿದೆ. ಮೋದಿ ಸರ್ಕಾರ ಅವರಿಗೆ ಯಾವಗಲೂ ಸ್ಪಂದಿಸಿದೆ. ಜಂಟಿ ಸಮಿತಿ ನಾಲ್ಕೈದು ದಿನದಲ್ಲೇ ಅಧ್ಯಯನ ಆರಂಭಿಸಲಿದೆ ಎಂದರು.
ಕೆಲ ರೈತರು ಹೋರಾಟ ವೇಳೆ ಕೋಪದಲ್ಲಿ ಏನೇನೋ ಮಾತನಾಡಿರುವಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಇದು ಸಹಜ. ಭಾರತದ 10-11 ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆಯಿದೆ. ಕೇಂದ್ರ ಸರ್ಕಾರ ಆ ಎಲ್ಲಾ ರಾಜ್ಯಗಳೊಂದಿಗೂ ಚರ್ಚಿಸಬೇಕಾಗುತ್ತದೆ. ಆದಾಗ್ಯೂ ಕರ್ನಾಟಕದ ರೈತರೊಂದಿಗೆ ಸಮಾಲೋಚನೆ ನಡೆಸಿದೆ ಸಮಿತಿ ರಚಿಸಿ ಶೀಘ್ರ ಅಧ್ಯಯನ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಆಗಲೇ 60 ಸಕ್ಕರೆ ಕಾರ್ಖಾನೆಗಳು ಶುರುವಾಗಿವೆ. ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಎಲ್ಲೂ ಇಲ್ಲದ ಪ್ರತಿಭಟನೆ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದೆ. ರೈತರಿಗೆ ಕಬ್ಬಿನ ಬೆಲೆ ಕಡಿಮೆಯಾಗಬಾರದು, ಗ್ರಾಹಕರಿಗೂ ಸಕ್ಕರೆ ಬೆಲೆ ಹೊರೆಯಾಗಬಾರದು. ಕಾರ್ಖಾನೆಗಳೂ ನಷ್ಟಕ್ಕೀಡಾಗಬಾರದು? ಇದನ್ನೆಲ್ಲಾ ಆಲೋಚಿಸಿಯೇ ಕೇಂದ್ರ ಸರ್ಕಾರ ದುಬಾರಿಯಾದರೂ ಸಕ್ಕರೆ ವಲಯದ ಎಥೆನಾಲ್ ಅನ್ನು ಹೆಚ್ಚು ಖರೀದಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ಕೇಂದ್ರ ಸರ್ಕಾರ ಎಥೆನಾಲ್ ಖರೀದಿಯನ್ನು ಹೆಚ್ಚಿಸಿದೆ. 38 ಲಕ್ಷ ಲೀಟರ್ ಇದ್ದುದನ್ನು ಈಗ 1200ಕೋಟಿ ಲೀಟರ್ಗೆ ಹೆಚ್ಚಿಸಿದೆ. ಕರ್ನಾಟಕದಿಂದಲೂ 165 ಕೋಟಿ ಲೀಟರ್ ಖರೀದಿಸುತ್ತಿದ್ದೇವೆ.
ಸಕ್ಕರೆ ಕಾರ್ಖಾನೆಗಳು ಯಾವತ್ತೂ 31ಕ್ಕಿಂತ ಕಡಿಮೆ ದರಕ್ಕೆ ಸಕ್ಕರೆ ಮಾರಾಟ ಮಾಡಿಲ್ಲ. ಕಳೆದ ಏಳೆಂಟು ವರ್ಷಗಳಿಂದಲೂ ಕನಿಷ್ಠ ಬೆಲೆಗಿಂತ ಕಡಿಮೆ ಹೋಗಲು ಬಿಟ್ಟಿಲ್ಲ. ನಿನ್ನೆ ರಾತ್ರಿಯೇ 50ಕ್ಕೆ ಸಕ್ಕರೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 60 ದಾಟಿದೆ ಎಂದು ತಿಳಿಸಿದರು.



