ನಕಲಿ ಮೊಬೈಲ್ ಚಾರ್ಜರ್ ಸರಬರಾಜು: ಸಂಸ್ಥೆಗೆ ಲಕ್ಷಾಂತರ ರೂ.ನಷ್ಟ, ನೌಕರ ಸಹಿತ ಐವರ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಕೊರಿಯರ್ ಮೂಲಕ ಬರುತ್ತಿದ್ದ ಗುಣಮಟ್ಟದ ಚಾರ್ಜರ್’ಗಳನ್ನು ಬದಲಿಸಿ ನಕಲಿ ಚಾರ್ಜರ್’ಗಳನ್ನು ಸರಬರಾಜು ಮಾಡಿ ಕಂಪನಿಗೆ ಲಕ್ಷಾಂತರ ರೂ.ನಷ್ಟ ಉಂಟು ಮಾಡಿದ ಆರೋಪದಡಿ ಮಂಗಳೂರು ಮೂಲದ ನೌಕರನ ಸಹಿತ ಐದು ಮಂದಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಸುರತ್ಕಲ್’ನ ಶಿವಬೀಡು ನಿವಾಸಿ ಹಿತೇಶ್ ರೈ, ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬೊಳ್ಳೂರುವಿನ ಎಸ್.ಆರ್.ಧರ್ಮ, ರಂಗಸಮುದ್ರದತೀರ್ಥೇಶ್ ರೈ, ಕುಶಾಲನಗರ ಆದಿಶಂಕರಾಚಾರ್ಯ ಬಡಾವಣೆಯ ಎಂ.ಟಿ.ಕೀರ್ತನ್ ಹಾಗೂ ಶಿರಂಗಾಲದ ಎಸ್.ಆರ್. ವಿನಯ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 14.10ಲಕ್ಷ ರೂ.ನಗದು ಹಣ, 73,500ರೂ. ಬೆಲೆ ಬಾಳುವ ಆಪಲ್ ಕಂಪನಿಗೆ ಸೇರಿದ ಒರಿಜಿನಲ್ ಮೊಬೈಲ್ ಚಾರ್ಜ‌ರ್’ಗಳು, 16 ಬಾಕ್ಸ್ ಗಳಲ್ಲಿದ್ದ 1,874 ನಕಲಿ ಮೊಬೈಲ್ ಚಾರ್ಜ‌ರ್’ಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ 3 ಮೊಬೈಲ್‌ಗಳು, ಒಂದು ಚಾಕು ಹಾಗೂ ಪ್ಲಾಸ್ಟರ್’ನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಹಾಸನದ ವೇರ್’ಹೌಸ್ ನಿಂದ ಕುಶಾಲನಗರದ ಕೆಲವು ಮೊಬೈಲ್ ಅಂಗಡಿಗಳಿಗೆ ಮೊಬೈಲ್ ಚಾರ್ಜರ್’ಗಳನ್ನು ‘ಡೆಲಿವರಿ’ ಎಂಬ ಹೆಸರಿನ ಕೊರಿಯರ್ ಸಂಸ್ಥೆ ಮೂಲಕ ಕೊಡಗಿನ ಕಳುಹಿಸಲಾಗುತ್ತಿತ್ತು.
ವಿವಿಧ ಕಂಪನಿಯ ಮೊಬೈಲ್’ಗಳ ಅದರಲ್ಲೂ ಮುಖ್ಯವಾಗಿ ಆಪಲ್ ಕಂಪನಿಗೆ ಸೇರಿದ ಮೊಬೈಲ್ ಚಾರ್ಜ‌ರ್’ಗಳನ್ನು ತೆಗೆದುಕೊಂಡು ನಕಲಿ ಚಾರ್ಜ‌ರ್’ಗಳನ್ನು ಕಂಪನಿಗೆ ಕಳುಹಿಸಿ ವಂಚಿಸುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಡೆಲಿವರಿ ಕೊರಿಯರ್ ಸಂಸ್ಥೆಯ ಸೆಕ್ಯೂರಿಟಿ ಮ್ಯಾನೇಜರ್ ಕುಶಾಲನಗರ ಠಾಣೆಗೆ ದೂರು ನೀಡಿ 2022ರ ಮೇ 9 ರಿಂದ ಆ.23ರ ನಡುವೆ ಬೇರೆ ಬೇರೆ ದಿನಾಂಕಗಳಲ್ಲಿ ವಿವಿಧ ತರಹದ ಶಿಪ್ ಮೆಂಟ್‌ಗಳನ್ನು ಅಂದರೆ ಮುಖ್ಯವಾಗಿ ಆಪಲ್ ಕಂಪೆನಿಗೆ ಸೇರಿದ ಮೊಬೈಲ್ ಚಾರ್ಜ‌ರ್’ಗಳನ್ನು ಹಾಸನದ ವೇರ್ ಹೌಸ್ ಮೂಲಕ
ರವಾನಿಸಿದವುಗಳನ್ನು ಡೆಲಿವರಿ ಬಾಯ್ ಮೂಲಕ ಸ್ವೀಕರಿಸಿ ಅದರಲ್ಲಿನ ಒರಿಜಿನಲ್ ಮೊಬೈಲ್ ಚಾರ್ಜ‌ರ್’ಗಳನ್ನು ತೆಗೆದುಕೊಂಡು, ನಕಲಿ ಮೊಬೈಲ್ ಚಾರ್ಜ‌ರ್’ಗಳನ್ನು ಹಾಕಿ ಕಂಪೆನಿಗೆ ಶಿಪ್’ಮೆಂಟ್ ಮೂಲಕ ಒಟ್ಟು 25 ಲಕ್ಷ ರೂ.ಗಳನ್ನು ನಂಬಿಕೆದ್ರೋಹ ಮಾಡಿ ವಂಚಿಸಲಾಗಿದೆ ಎಂದು ಆರೋಪಿಸಿದ್ದರು.
ಪ್ರಕರಣದ ತನಿಖೆಗಾಗಿ ಕುಶಾಲನಗರ ಟೌನ್ ಪೊಲೀಸ್ ಉಪ ನಿರೀಕ್ಷಕ ಎಂ.ಡಿ.ಅಪ್ಪಾಜಿ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
ತನಿಖೆ ಆರಂಭವಾದಾಗ ಉಡಾನ್ ಸಂಸ್ಥೆಯ ನೌಕರ ಹಿತೇಶ್ ರೈ, ಕುಶಾಲನಗರದ ಕೊರಿಯರ್ ಸಂಸ್ಥೆಯ ನೌಕರರ ಜೊತೆ ಶಾಮೀಲಾಗಿ ನಿರಂತರವಾಗಿ ಈ ದಂಧೆ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.
ಕೊರಿಯರ್ ಮೂಲಕ ಕುಶಾಲನಗರಕ್ಕೆ ಬಂದ ಚಾರ್ಜರ್’ಗಳನ್ನು ಈ ಕೊರಿಯರ್ ಹುಡುಗರು ಮತ್ತೆ ಹಿತೇಶ್ ರೈಗೆ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿ ಹಿತೇಶ್ ರೈ, ಅದರಲ್ಲಿದ್ದ ಸಾವಿರಾರು ರೂ.ಬೆಲೆಬಾಳುವ ಚಾರ್ಜರ್’ಗಳನ್ನು ತೆಗೆದು, ಅದರ ಬದಲಿಗೆ ಕಡಿಮೆ ಬೆಲೆಯ ಚಾರ್ಜರ್’ಗಳನ್ನು ಇರಿಸಿ ಸರಬರಾಜು ಮಾಡಿಸುತ್ತಿದ್ದನೆನ್ನಲಾಗಿದೆ.
ಈ ರೀತಿ ಪಡೆದ ಚಾರ್ಜರ್’ಗಳನ್ನು ಆರೋಪಿ ಹಿತೇಶ್ ರೈ, ದಕ್ಷಿಣ ಕನ್ನಡ, ಕೇರಳ ಮತ್ತು ಕೊಡಗು ಜಿಲ್ಲೆಯ ಬೇರೆ ಬೇರೆ ಮೊಬೈಲ್ ಅಂಗಡಿಗಳಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸುವುದರೊಂದಿಗೆ, ಕುಶಾಲನಗರಕ್ಕೆ ಆಗಮಿಸಿ ಕೊರಿಯರ್ ಡೆಲಿವರಿ ಮಾಡುವ ಹುಡುಗರಿಗೆ ಅಲ್ಪ ಮೊತ್ತದ ಹಣ ನೀಡುತ್ತಿದ್ದನೆಂಬುದು ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ-ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್‌.ವಿ.ಗಂಗಾಧರಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ., ಕುಶಾಲನಗರ ಟೌನ್ ಪೊಲೀಸ್ ಠಾಣಾ ಪಿಎಸ್‌ಐ ಅಪ್ಪಾಜಿ ಎಂ.ಡಿ., ಪ್ರೊಬೆಷನರಿ ಪಿಎಸ್‌ಐ ಕಾಶಿನಾಥ ಬಗಲಿ, ಎಎಸ್‌ಐ ಗಣಪತಿ ಪಿ.ಕೆ. ಸಿಬ್ಬಂದಿಗಳಾದ ಜಯಪ್ರಕಾಶ್, ಸಂದೀಪ್, ಅರುಣ್ ಕುಮಾರ್, ಮನೋಜ್ ಕುಮಾರ್, ಸಿದ್ದರಾಜು, ಸೌಮ್ಯ, ಸಿಡಿಆರ್ ಘಟಕದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರವೀಣ್ ಮತ್ತು ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಪ್ರಕರಣವನ್ನು ಪತ್ತೆಹಚ್ಚಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಬಹುಮಾನವನ್ನು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!