ಸುಭಾಷರ ಸಹೋದರ ಸುರೇಶ್ ಚಂದ್ರ ಬೋಸ್ʼರದ್ದು ಎಂತಹ ಅದ್ಭುತ ವ್ಯಕ್ತಿತ್ವ ಗೊತ್ತಾ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಾನಕಿನಾಥ್ ಬೋಸ್ ರ ಮಗ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ ಸುರೇಶ್ ಚಂದ್ರ ಬೋಸ್ ಅವರ ಬಗ್ಗೆ ತಿಳಿದವರು ಕಡಿಮೆ. ಸುರೇಶ್ ಚಂದ್ರ ಅವರು ತಮ್ಮನಂತೆ ಅಪ್ರತಿಮ ದೇಶಭಕ್ತನಾಗಿದ್ದರು. ಆದರೆ, ಸುಭಾಷ್‌ ಹಾಗೂ ಸುರೇಶರ ಹೋರಾಟ ಮಾರ್ಗಗಳು ಮಾತ್ರ ವಿಭಿನ್ನವಾಗಿದ್ದವು.
ಸುರೇಶ್‌ ಚಂದ್ರ ಬೋಸ್‌ ರ ಗಟ್ಟಿ ವ್ಯಕ್ತಿತ್ವ, ನ್ಯಾಯಪರತೆ ಹಾಗೂ ನೇರ ನಿಷ್ಠೂರ ನಡೆಗಳನ್ನು ʼದೇಶಬಂಧು ಗೋಪಬಂಧು ದಾಸ್ʼ ಪ್ರಕರಣ ಓರೆಗೆ ಹಚ್ಚುತ್ತದೆ.
ಅದು 1921 ಅಸಹಕಾರ ಚಳವಳಿಯ ಸಂದರ್ಭ. ಆ ವೇಳೆ ಮಹೋನ್ನತ ಸ್ವಾತಂತ್ರ್ಯ ಸೇನಾನಿ ಎನಿಸಿಕೊಂಡಿದ್ದ ಗೋಪಬಂಧು ದಾಸ್ ಹೆಸರು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಒಡಿಶಾದಲ್ಲಿ ಅಸಹಕಾರ ಆಂದೋಲನದ ನೇತೃತ್ವ ವಹಿಸಿದ್ದ ಅವರ ವಿರುದ್ಧ ಇಡೀ ಸರ್ಕಾರಿ ಯಂತ್ರವೇ ನಿಂತಿತ್ತು. ಗೋಪಬಂಧು ಮೇಲೆ ಬ್ರಿಟೀಷರು ಕಣ್ಣಿಟ್ಟಿದ್ದರು. ಅವರನ್ನು ಹಣಿಯಲು ಸೂಕ್ತ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದರು. ಅವರು ನಿರೀಕ್ಷಿಸುತ್ತಿದ್ದ ಘಳಿಗೆ 1921ರಲ್ಲಿಯೇ ಒದಗಿಬಂತು. ಗೋಪಬಂಧು ಅವರನ್ನು ಪ್ರಕರಣವೊಂದರ ಆರೋಪಿಯನ್ನಾಗಿ ಕಟಕಟೆಯ ಮುಂದೆ ತಂದು ನಿಲ್ಲಿಸಲಾಯಿತು. ಆ ವೇಳೆಗೆ ಖೋರ್ಧಾ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದವರು ಸುರೇಶ್‌ ಚಂದ್ರ ಬೋಸ್.
ಆ ಕಾಲಘಟ್ಟರಲ್ಲಿ ಇದೊಂದು ಅತ್ಯಂತ ಕಠಿಣ ಪ್ರಕರಣವಾಗಿತ್ತು. ಅತ್ತ ಬ್ರಿಟೀಷರ ಕ್ರೂರತೆ.. ಇತ್ತ ಸ್ವಾತಂತ್ರ್ಯಕ್ಕಾಗಿ ಹಸಿದ ಭಾರತೀಯರು.. ಸುರೇಶ್‌ ಚಂದ್ರ ಅತ್ಯಂತ ನಾಜೂಕಾಗಿ ಪ್ರಕರಣವನ್ನು ನಿಭಾಯಿಸಬೇಕಿತ್ತು. ‌ಕೊಂಚ ಎಡವಿದರೂ ದೊಡ್ಡ ಪರಿಣಾಮ ಎದುರಿಸಬೇಕಿತ್ತು. ಸುರೇಶ್ ಅದನ್ನು ನಿಭಾಯಿಸಿದರು.. ಅವರು ನೀಡಿದ ಐತಿಹಾಸಿಕ ತೀರ್ಪು ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಅದನ್ನು ಕೇಳಿದವರೆಲ್ಲರೂ ಒಮ್ಮೆಲೆ ದಂಗು ಬಡಿದುಹೋಗಿದ್ದರು.
ಗೋಪಬಂಧು ನೇತೃತ್ವದ ‘ದಿ ಸಮಾಜ’ ಪತ್ರಿಕೆಯು ಬ್ರಿಟಿಷ್ ಸರ್ಕಾರದ ದುರಾಡಳಿತವನ್ನು ಬಯಲಿಗೆಳೆಯುತ್ತ ಜನರಲ್ಲಿ ಅಸಹಕಾರ ಸಂದೇಶವನ್ನು ಸಾರುತ್ತಿತ್ತು. ಆಗಸ್ಟ್ 13, 1921 ರಂದು ‘ಸಮಾಜ’ ಪತ್ರಿಕೆಯು ಒಂದು ಸುದ್ದಿಯನ್ನು ಬಿತ್ತರಿಸಿತ್ತು. ಅದರಲ್ಲಿ ʼಖೋರ್ಧಾ ಬಳಿಯ ಬೆಗುನಿಯಾದಲ್ಲಿ ಒಬ್ಬ ಹಳ್ಳಿ ಹುಡುಗಿಯನ್ನು ಅಪಹರಿಸಿ ಹತ್ಯೆ ಮಾಡಿ ಆಕೆಯ ಸಹೋದರನನ್ನು ಕೊಂದುಹಾಕಲಾಗಿದೆ ಎಂಬ ಸುದ್ದಿಯನ್ನು ಪ್ರಕಟಿಸಿತು. ಆದರೆ ಪತ್ರಿಕೆಯು ಆ ಸುದ್ದಿಯನ್ನು ʼಆರೋಪʼ ಎಂದಷ್ಟೇ ಪ್ರಕಟಿಸಿತ್ತು. ಜೊತೆಗೆ ಈ ಬಗ್ಗೆ ಪರಿಶೀಲನೆ ನಡೆಸಿ ವಾಸ್ತವಾಂಶ ಪ್ರಕಟಿಸುತ್ತೇವೆ ಎಂದೂ ಸುದ್ದಿಯಲ್ಲಿ ಹೇಳಲಾಗಿತ್ತು. ಆದರೆ ಆ ಬಳಿಕ ಈ ಪ್ರಕರಣದಲ್ಲಿ ಇಬ್ಬರು ಕಾನ್ಸ್‌ ಸ್ಟೇಬಲ್‌ ಗಳು ಯುವತಿ ಹಾಗೂ ಆಕೆಯ ಸಹೋದರನನ್ನು ಕೊಂದಿದ್ದಾರೆ ಎಂದು ಸುದ್ದಿ ಹಬ್ಬಿತು. ಪತ್ರಿಕೆಯೇ ಹೀಗೆ ಸುದ್ದಿ ಹಬ್ಬಿಸಿದೆ ಎಂದು ಕೇಳಿಬರತೊಡಗಿದಾಗ, 1921ರ ಸೆಪ್ಟೆಂಬರ್ 24 ರಂದು, ಸ್ಪಷ್ಟೀಕರಣ ನೀಡಿದ್ದ ಪತ್ರಿಕೆಯು ʼತಾನು ʼಕಾನ್‌ಸ್ಟೆಬಲ್‌ಗಳ ಹೆಸರನ್ನು ಉಲ್ಲೇಖಿಸಿಲ್ಲʼ ಜೊತೆಗೆ ಜನರು ಈ ವಿಚಾರದಲ್ಲಿ ಗೊಂದಲ ಮಾಡಿಕೊಂಡಿರುವುದರಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿತು.
ಆದರೆ ಇಂತಹ ಸಂದರ್ಭವನ್ನೇ ಕಾಯುತ್ತಿದ್ದ ಬ್ರಿಟಿಷ್‌ ಸರ್ಕಾರ ಈ ಪ್ರಕರಣವನ್ನು ತನ್ನ ಪರವಾಗಿ ಬಳಸಿಕೊಳ್ಳಲು ತೀರ್ಮಾನಿಸಿ ʼಬ್ರಿಟೀಷ್‌ ಸರ್ಕಾರದ ವಿರುದ್ಧ ಸಂಚುʼ ಆರೋಪವೊಡ್ಡಿ ಗೋಪಬಂಧು ದಾಸ್ ಮಾನನಷ್ಟ ಮೊಕದ್ದಮೆ ಹೂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೈಸ್ ಅವರ ಸೂಚನೆ ಮೇರೆಗೆ, ಖೋರ್ಧಾದ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿದರು. ಆ ಬಳಿಕ ಗೋಪಬಂಧುವನ್ನು ಸೆಪ್ಟೆಂಬರ್ 28, 1921 ರಂದು ಬಂಧಿಸಲಾಯಿತು. ಅವರನ್ನು ಖೋರ್ಡಾ ಮ್ಯಾಜಿಸ್ಟ್ರೇಟ್ ಸುರೇಶ್ ಚಂದ್ರ ಬೋಸ್ ಅವರ ಮುಂದೆ ಹಾಜರುಪಡಿಸಲಾಯಿತು. ಆ ವೇಳೆ ಗೋಪಬಂಧು ಸತ್ಯಾಗ್ರಹಿಯಾಗಿದ್ದರು, ಅವರು ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಹಕರಿಸುವುದಿಲ್ಲ ಎಂದು ಪ್ರಮಾಣ ಮಾಡಿದರು. ಅವರು ತಮ್ಮ ಪರವಾಗಿ ಯಾವುದೇ ವಕೀಲರನ್ನು ನಿರಾಕರಿಸಿದರು. ಜಾಮೀನು ಪಡೆಯಲು ನಿರಾಕರಿಸಿದರು. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ನವೆಂಬರ್ 6 ರಂದು ವಿಚಾರಣೆಯ ದಿನದಂದು, ಸುಮಾರು ಏಳರಿಂದ ಎಂಟು ಸಾವಿರ ಜನರು ಖೋರ್ಡಾ ಉಪ-ಜೈಲಿಗೆ ಬಂದು ಗೋಪಬಂಧು ಅವರನ್ನು ಮೆರವಣಿಗೆಯಲ್ಲಿ ಹೂಮಾಲೆಯೊಂದಿಗೆ ಬರಮಾಡಿಕೊಂಡರು. ಗೋಪಬಂಧು ಜನಪ್ರಿಯತೆ ಗಮನಿಸಿದ ಮ್ಯಾಜಿಸ್ಟ್ರೇಟ್, ವಿಚಾರಣೆಯನ್ನು ನ್ಯಾಯಾಲಯದ ಹೊರಗೆ ಮರದ ಕೆಳಗೆ ತೆರೆದ ಮೈದಾನದಲ್ಲಿ ನಡೆಸಲು ತೀರ್ಮಾನಿಸಿದರು. ಸರ್ಕಾರದ ಪರವಾಗಿ ಅನೇಕ ಸಾಕ್ಷಿಗಳಿದ್ದರು, ಅವರಲ್ಲಿ ಹೆಚ್ಚಿನವರು ಗೋಪಬಂಧು ವಿರುದ್ಧ ಹಲ್ಲು ಮಸೆಯುತ್ತಿದ್ದ ಸರ್ಕಾರಿ ನೌಕರರು. ಆದರೆ ಗೋಪಬಂಧು ತಮ್ಮ ಪರವಾಗಿ ಯಾರನ್ನೂ ಸಾಕ್ಷಿಯಾಗಿ ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ ಅವರ ಪರ ವಕೀಲರೂ ಇರಲಿಲ್ಲ. ಆದ್ದರಿಂದ ಸಹಜವಾಗಿಯೇ ಗೋಪಬಂಧುಗೆ ಶಿಕ್ಷೆಯಾಗುವುದ ಖಚಿತವಾಗಿತ್ತು. ಒರಿಸ್ಸಾದಲ್ಲಿ ಗೋಪಬಂಧು ಕರೆಗೆ ಜನರು ಭಾರಿ ಪ್ರಮಾಣದಲ್ಲಿ ಸ್ಪಂದಿಸಿದ್ದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿತ್ತು. ಆದ್ದರಿಂದ ಸ್ವತಃ ಒರಿಸ್ಸಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್‌ಗೆ ಪತ್ರಬರೆದು ಗೋಪಬಂಧು ದೊಡ್ಡ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು.
ಅಸಹಕಾರ ಚಳವಳಿಯನ್ನು ದುರ್ಬಲಗೊಳಿಸಲು ಗೋಪಬಂಧು ವಿರುದ್ಧ ಇಡೀ ಅಧಿಕಾರಶಾಹಿ ನಿಂತಿತ್ತು. ತೀರ್ಪಿನ ದಿನದಂದು, ಸುಮಾರು 30,000 ಜನರು ನ್ಯಾಯಾಲಯಕ್ಕೆ ಬಂದರು. ಗೋಪಬಂಧು ತೀರ್ಪಿನ ಬಳಿಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸದಂತೆ ಜನರನ್ನು ಕೇಳಿಕೊಂಡರು. ಮ್ಯಾಜಿಸ್ಟ್ರೇಟ್ ಸುರೇಶ್‌ ಚಂದ್ರ ಬೋಸ್ ಕೂಲಂಕುಶವಾಗಿ ಪ್ರಕರಣದ ವಿಚಾರಣೆ ನಡೆಸಿದರು. ಬ್ರಿಟೀಷ್‌ ನ್ಯಾಯಾಲಯಗಳು ʼಹೇಗೆʼ ತೀರ್ಪು ನೀಡುತ್ತವೆ ಎಂಬುದು ತಿಳಿದ ವಿಚಾರವಾದ್ದರಿಂದ ಭಾರತೀಯರು ಉಸಿರು ಬಿಗಿಹಿಡಿದು ಕುಳಿತು ತಮ್ಮ ನಾಯಕನ ಭವಿಷ್ಯ ನಿರ್ಧರಿಸುವ ತೀರ್ಪಿಗಾಗಿ ಕಾಯುತ್ತಿದ್ದರು. ವಿಚಾರಣೆ ಮುಗಿದು ಮ್ಯಾಜಿಸ್ಟ್ರೇಟ್ ಸುರೇಶ್‌ ಚಂದ್ರ ಬೋಸ್ ತೀರ್ಪು ಓದಿದಾಗ ಅಲ್ಲಿದ್ದರರೆಲ್ಲ ಪರಮಾಶ್ಚರ್ಯದ ಉದ್ಘಾರ ಹೊರಟಿತ್ತು. ದೇಶಭಕ್ತ ಗೋಪಬಂಧು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಗೋಪಬಂಧುವನ್ನು ಆಗಿಂದಾಗಲೇ ಬಿಡುಗಡೆ ಮಾಡುವಂತೆ ಸೂಚಿಸಿದ ಬೋಸ್‌, ಅವರು ಅಪರಾಧಿಯಲ್ಲ, ಮಾಡದ ಅಪರಾಧಕ್ಕೆ ಅವರು ಶಿಕ್ಷೆ ಅನುಭವಿಸಲು ಕೋರ್ಟ್ ಬಿಡುವುದಿಲ್ಲ ಎಂದು ಘೋಷಿಸಿದರು. ಈ ತೀರ್ಪಿನಿಂದ ಇಡೀ ಸರ್ಕಾರಿ ಯಂತ್ರವು ನಿರಾಶೆಗೊಂಡಿತು. ಅಪಮಾನದಿಂದ ಕುದ್ದುಹೋಯಿತು. ಸುರೇಶ್‌ ಚಂದ್ರ ಬೋಸ್‌ ಈ ಪ್ರಕರಣದಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿದ್ದರು. ತೀರ್ಪಿನ ಪ್ರತಿ ಕೆಳಗಿಡುತ್ತಲೇ ಸುರೇಶ್ ಚಂದ್ರ ಬೋಸ್ ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ರವಾನಿಸಿದರು.
ಈ ಐತಿಹಾಸಿಕ ತೀರ್ಪನ್ನು ನೀಡುವ ಮೂಲಕ ಸುರೇಶ್ ಚಂದ್ರ ಬೋಸ್ ಅವರು ತಮ್ಮ ಧೈರ್ಯ, ದೇಶಭಕ್ತಿ ಮತ್ತು ಅಮಾಯಕರಿಗೆ ನ್ಯಾಯ ಒದಗಿಸುವ ಮತ್ತು ಒತ್ತಡಕ್ಕೆ ಮಣಿಯದ ಧೀರತ್ವವನ್ನು ಪ್ರದರ್ಶಿಸಿದರು. ಆ ದಿನಗಳಲ್ಲಿ ಇಂಗ್ಲಿಷ್ ಆಡಳಿತದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹೆಚ್ಚಿನ ಭಾರತೀಯ ಅಧಿಕಾರಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು, ಬ್ರಿಟೀಷರ ಒಲವು ಗಳಿಸಲು ಸ್ವಾತಂತ್ರ್ಯಕ್ಕಾಗಿ ಹೋರಾಡುವ ತಮ್ಮ ಸಹ ಭಾರತೀಯರ ವಿರುದ್ಧವೇ ಮಸಲತ್ತು ನಡೆಸುತ್ತಿದ್ದ ಘಟನೆಗಳು ಸಾಮಾನ್ಯವಾಗಿದ್ದವು. ಅಂತಹ ಜನರ ಮಧ್ಯೆ, ಸ್ವಾತಂತ್ರ್ಯ ಹೋರಾಟಗಾರನಿಗಾಗಿ, ನ್ಯಾಯಪರತೆಗಾಗಿ ತಾನು ಕಷ್ಟಪಟ್ಟು ಗಳಿಸಿಕೊಂಡಿದ್ದ ಉದ್ಯೋಗವನ್ನೇ ಬಲಿಕೊಟ್ಟ ಸುರೇಶ್‌ ಚಂದ್ರ ಬೋಸ್‌ ಜನರ ಮನಸ್ಸಿನಲ್ಲಿ ಅನರ್ಘ್ಯ ರತ್ನದಂತೆ ಹೊಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!