ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ತೀವ್ರ ಭೀತಿ ಮೂಡಿಸಿದ್ದ ಶಂಕಿತ ಎಬೋಲಾ ವೈರಸ್ (Ebola Virus) ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಪತ್ತೆಯಾಗಿದ್ದ ಶಂಕಿತ ರೋಗಿಯ ರಕ್ತದ ಮಾದರಿಯ ಪ್ರಯೋಗಾಲಯ ತಪಾಸಣೆ ಮುಗಿದಿದ್ದು, ವರದಿಯು ‘ನೆಗೆಟಿವ್’ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಮ್ಮ ಅಧಿಕೃತ ಎಕ್ಸ್ ಸ್ಪಷ್ಟಪಡಿಸಿದ್ದಾರೆ.
ದಿನೇಶ್ ಗುಂಡೂರಾವ್ ಸ್ಪಷ್ಟನೆ
ಪ್ರಯೋಗಾಲಯದ ಪರೀಕ್ಷೆಯ ನಂತರ ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣವು ನೆಗೆಟಿವ್ ಬಂದಿದೆ. ಸದರಿ ವ್ಯಕ್ತಿಗೆ ಎಬೋಲಾ ವೈರಸ್ ಸೋಂಕು ತಗುಲಿಲ್ಲ ಎಂಬುದನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳ ಅನ್ವಯ ಎಲ್ಲಾ ವೈದ್ಯಕೀಯ ಪ್ರೋಟೋಕಾಲ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ನಾಗರಿಕರು ಯಾರೂ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ. ಕೇವಲ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಅಧಿಕೃತ ಪ್ರಕಟಣೆಗಳು ಮತ್ತು ಮಾಹಿತಿಗಳನ್ನಷ್ಟೇ ನಂಬಬೇಕು ಎಂದು ಮನವಿ ಮಾಡಿದ್ದಾರೆ. ಪರೀಕ್ಷೆ ನೆಗೆಟಿವ್ ಬಂದಿದ್ದರೂ ಸಹ ಕರ್ನಾಟಕ ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಸಂಪೂರ್ಣ ಸನ್ನದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಏರ್‌ಪೋರ್ಟ್‌ಗಳಲ್ಲಿ ಹೈ ಅಲರ್ಟ್
ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕವಾಗಿ ಎಬೋಲಾ ತುರ್ತು ಪರಿಸ್ಥಿತಿ ಘೋಷಿಸಿರುವ ಹಿನ್ನೆಲೆಯಲ್ಲಿ, ಕಾಂಗೋ ಮತ್ತು ಉಗಾಂಡ ಸೇರಿದಂತೆ ಆಫ್ರಿಕಾ ದೇಶಗಳಿಂದ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಕಡ್ಡಾಯ ಆರೋಗ್ಯ ಉಸ್ತುವಾರಿಯಲ್ಲಿ ಇಡಲಾಗುತ್ತಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳಲ್ಲಿ ವಿಶೇಷ ಐಸೊಲೇಷನ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.



