ಬೆಟ್ಟತ್ತೂರಿನ ದಟ್ಟಾರಣ್ಯದಲ್ಲಿ ವಾಮಾಚಾರದ ಶಂಕೆ: ಗ್ರಾಮಸ್ಥರಲ್ಲಿ ಆತಂಕ

ಹೊಸದಿಗಂತ ವರದಿ ಮಡಿಕೇರಿ:

ಇಲ್ಲಿಗೆ ಸಮೀಪದ ಬೆಟ್ಟತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ವಾಮಾಚಾರ ನಡೆದಿರುವ ಕುರುಹುಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇಲ್ಲಿಗೆ ಸಮೀಪದ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟತ್ತೂರು ಜಂಕ್ಷನ್’ನಿಂದ‌ ಕೇವಲ 500 ಮೀಟರ್ ಅಂತರದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಯಾರೋ ಆಗಂತುಕರು ಪಾಯಸ, ತೆಂಗಿನಕಾಯಿ, ಮೊಸರು, ಅವಲಕ್ಕಿ ಹಾಗೂ ಹಿಟ್ಟಿನಲ್ಲಿ ಮಾಡಿರುವ ಉಂಡೆಯಂತಹ ಪದಾರ್ಥವನ್ನು ಪೂಜೆಗೆ ಬಳಸಿರುವುದು ಹಾಗೂ ಕೋಳಿಗಳನ್ನು ಬಲಿ ಕೊಟ್ಟಿರುವುದು ಗೋಚರಿಸಿದೆ.
ವಾಮಾಚಾರ ನಡೆದಿರುವ ಸ್ಥಳದ ಪಕ್ಕದ ಜಾಗದಲ್ಲಿ ವಾಸವಾಗಿರುವ ಹೊಸಮನೆ ಪ್ರವೀಣ್ ಅವರು ತಮ್ಮ ಪತ್ನಿಯೊಂದಿಗೆ ಮನೆಗೆ ಹೋಗುವಾಗ ಈ ಘಟನೆ ಬೆಳಕಿಗೆ ಬಂದಿದೆ.

ಮೊದಲು ಮದ್ಯದ ಬಾಟಲಿ ಹಾಗೂ ಕೆಲವು ಬಾಳೆ ಎಲೆಯನ್ನು ಕಂಡ ಪ್ರವೀಣ್ ದಂಪತಿ, ಯಾರೋ ಯುವಕರು ಮೋಜು ಮಾಡಿರಬೇಕೆಂದು ಭಾವಿಸಿದ್ದರು. ಆದರೆ ತಮ್ಮ ತೋಟಕ್ಕೆ ಹೋಗುತ್ತಿದ್ದ ವೇಳೆ ಮತ್ತೊಂದು ದಿಕ್ಕಿನಲ್ಲಿ ಕೋಳಿಯೊಂದರ ತಲೆ ಬಿದ್ದಿರುವುದನ್ನು ಗಮನಿಸಿ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲೇ ಮೂರು ಕಡೆಗಳಲ್ಲಿ ಬಾಳೆ ಎಲೆಯಲ್ಲಿ ಎಡೆಯಿಟ್ಟು ಪೂಜೆ ಮಾಡಿರುವುದು ಹಾಗೂ ಕೋಳಿ ಬಲಿ ನೀಡಿರುವುದು ಗೋಚರಿಸಿದೆ.

ಭಾನುವಾರ ರಾತ್ರಿ ಈ ಕೃತ್ಯ ನಡೆದಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದು, ವಿಭಿನ್ನ ದಿಕ್ಕುಗಳಲ್ಲಿ ಮೂರು ಜಾಗವನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ, ಬಾಳೆ ಎಲೆಯಲ್ಲಿ ಮಣ್ಣಿನ ಸಣ್ಣ ಸಣ್ಣ ಮೂರು ಮಡಿಕೆಗಳನ್ನು ಇಡಲಾಗಿದೆ. ಜತೆಗೆ ಅಕ್ಕಿಯಿಂದ ಮಾಡಿರುವ ಉಂಡೆಯಾಕಾರದ ಹಳದಿ ಬಣ್ಣದ ಕಡುಬು, ಅವಲಕ್ಕಿ, ಲೋಟದಲ್ಲಿ ಪಾಯಸ ಹಾಗೂ ಮದ್ಯವನ್ನು ಇಡಲಾಗಿದೆ. ಪೂಜೆ ಮಾಡಲಾಗಿರುವ ಸ್ಥಳದ ಎಲ್ಲಾ ವಿರುದ್ಧ ದಿಕ್ಕಿನಲ್ಲಿ ಒಂದು ಕಡೆ ಕೋಳಿ ತಲೆ ಹಾಗೂ ಅದರ ದೇಹವನ್ನು ಪೂಜಾ ಸ್ಥಳದ ಹಿಂಬದಿಗೆ ಎಸೆಯಲಾಗಿದೆ.

ವಾಮಾಚಾರ ನಡೆದಿರುವ ಸ್ಥಳ ದಿವಂಗತ ಕೂಪದಿರ ಮುತ್ತು ಎಂಬವರ ಸ್ವಾಧೀನದಲ್ಲಿದ್ದು, ಈ ಜಾಗಕ್ಕಾಗಿ ಮುತ್ತು, ರವಿಕುಮಾರ್, ಸತೀಶ್ ಹಾಗೂ ಪಳಂಗಪ್ಪ ಎಂಬವರುಗಳ ನಡುವೆ ಕಳೆದ ಕೆಲವು ವರ್ಷಗಳಿಂದ ತಗಾದೆ ಇದೆ ಎನ್ನಲಾಗಿದೆ. ಈ ಜಾಗವನ್ನು ತಮ್ಮತಮ್ಮ ಹೆಸರುಗಳಿಗೆ ವರ್ಗಾವಣೆ ಮಾಡುವಂತೆ ಮಡಿಕೇರಿ ತಹಶೀಲ್ದಾರರ ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆನ್ನಲಾಗಿದ್ದು, ಈ ಜಾಗವನ್ನು ತಮ್ಮದಾಗಿಸಿಕೊಳ್ಳಲು ಯಾರೋ ಒಬ್ಬರು ಈ ವಾಮಾಚಾರ ಮಾಡಿಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!