Saturday, June 25, 2022

Latest Posts

ಏ. 6-10 ಬೆಂಗಳೂರಿನಲ್ಲಿ ನಡೆಯಲಿದೆ ಸ್ವದೇಶಿ ಮೇಳ: ಗೃಹೋತ್ಪನ್ನ, ಆಹಾರ ಮಳಿಗೆಗಳ ಆಕರ್ಷಣೆ

 

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಾಗೂ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಏ. 6ರಿಂದ 10ರವರೆಗೆ ಸ್ವದೇಶಿ ಮೇಳ ಆಯೋಜಿಸಲಾಗಿದೆ.

ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ ಗ್ರೌಂಡ್ಸ್)ದಲ್ಲಿ ನಡೆಯುವ ಮೇಳದಲ್ಲಿ 222 ಮಳಿಗೆಗಳು ಪಾಲ್ಗೊಳ್ಳುತ್ತವೆ. ಈ ಪೈಕಿ 117 ಮಳಿಗೆಗಳು ವಸ್ತು ಮಾರಾಟಗಳ ಮಳಿಗೆಗಳಾದರೆ, ಉಳಿದ 25 ಆಹಾರ ಮಳಿಗೆಗಳು. ನಿತ್ಯ ಬಳಕೆಯ ವಸ್ತುಗಳು, ಖಾದಿ ಉತ್ಪನ್ನಗಳು, ಗೃಹ ಉತ್ಪನ್ನಗಳು, ನೈಸರ್ಗಿಕ ಸೌಂದರ್ಯವರ್ಧಕಗಳು, ಗೋ ಉತ್ಪನ್ನಗಳು, ತಂತ್ರಜ್ಞಾನ ಸಂಬಂಧಿ ಹಾಗೂ ದೇಸಿ ಆಹಾರ ಮಳಿಗೆಗಳು ಭಾಗವಹಿಸಲಿವೆ.

ಏ. 6ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳವನ್ನು ಉದ್ಘಾಟಿಸಲಿದ್ದು, ಸುತ್ತೂರು ಶ್ರೀಗಳು ಆಶೀರ್ವಚನ ನೀಡುತ್ತಾರೆ. ಮ್ಯಾಗಸ್ಸೆಸೆ ಪುರಸ್ಕೃತ ಸೌರ ವಿಜ್ಞಾನಿ ಡಾ. ಹರೀಶ್ ಹಂದೆ ಮುಖ್ಯ ಅತಿಥಿಯಾಗಿ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಅತಿಥಿಯಾಗಿ ಭಾಗವಹಿಸಲಿದ್ದು, ಅರ್ಥಶಾಸ್ತ್ರಜ್ಞ ಹಾಗೂ ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಮುಖ್ಯಭಾಷಣ ಮಾಡಲಿದ್ದಾರೆ.

ಸಮಾರೋಪ ಸಮಾರಂಭ ಏ. 10ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ. ಸಂಸದ ತೇಜಸ್ವಿಸೂರ್ಯ, ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್ ಪಾಲ್ಗೊಳ್ಳಲಿದ್ದಾರೆ.

ಮೇಳದ ಐದು ದಿನ ವಿವಿಧ ರೀತಿಯ ಶಿಬಿರಗಳು, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇಶೀಯ ಆಟಗಳನ್ನು ಏರ್ಪಡಿಸಲಾಗಿದೆ ಎಂದು ಮೇಳದ ಸಂಚಾಲಕ ಹಾಗೂ ಹಿರಿಯ ನಟ ಪ್ರಕಾಶ್ ಬೆಳವಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘಟಕ ರಘುರಾಮ್ ಬಿ.ಎಚ್., ಕಿಶೋರ್ ಪಟವರ್ಧನ್ ಮತ್ತು ಜಗದೀಶ್ ಉಪಸ್ಥಿತರಿದ್ದರು.

ಸ್ವದೇಶಿ ಮೇಳದ ವಿಶೇಷತೆಗಳು:

* ಮೇಳದಿಂದ ಕನಿಷ್ಠ ತ್ಯಾಜ್ಯ ಉತ್ಪತ್ತಿಯಾಗುವುದನ್ನು ಖಾತ್ರಿ ಪಡಿಸುವುದಕ್ಕೆ ಆಹಾರ ಮೇಳದಲ್ಲಿ ಸ್ಟೀಲ್ ತಟ್ಟೆ ಲೋಟಗಳನ್ನು ಬಳಸಲಾಗುತ್ತದೆ.

* ಕರಾವಳಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಖಾದ್ಯಗಳಲ್ಲದೇ ರಾಜಸ್ಥಾನಿ, ಗುಜರಾತಿ ಖಾದ್ಯಗಳನ್ನು ಸವಿಯುವ ಅವಕಾಶ.

* ಸುಮಾರು 60 ಬಗೆಯ ದೇಸೀ ಪಾನೀಯಗಳು ಆಹಾರ ಮಳಿಗೆಯಲ್ಲಿ ಲಭ್ಯ.

* ರೈತರಿಂದ ನೇರವಾಗಿ ಸಾವಯವ ತರಕಾರಿ ಮಾರಾಟ ವ್ಯವಸ್ಥೆಯಿರುತ್ತದೆ.

* ರಾಮನವಮಿಯ ದಿನ ಸಾರ್ವಜನಿಕರಿಗೆ ಪಾನಕ ವಿತರಣೆ ಮಾಡಲಾಗುತ್ತದೆ.

* ಭಾರತೀಯ ಪಾರಂಪರಿಕ ಉಡುಗೆ ಸೀರೆ ಧರಿಸಿಕೊಂಡು ಬರುವ ಮಹಿಳೆಯರಿಗೆ ಪ್ರತೀ ದಿನ ಮೂವರಿಗೆ ಲಕ್ಕಿಡಿಪ್ ಮೂಲಕ ಸೌಭಾಗ್ಯವತಿ ಉಡುಗೊರೆ ನೀಡಲಾಗುತ್ತದೆ.

* ನೋಂದಣಿ ಮಾಡಿಕೊಂಡವರಿಗೆ ತಾರಸಿ ತೋಟ ತರಬೇತಿ, ನಿತ್ಯ ಬಳಕೆ ವಸ್ತು ತಯಾರಿಕಾ ಶಿಬಿರ, ಆಯುರ್ವೇದ ಶಿಬಿರ, ಸ್ವದೇಶಿ ಭಂಡಾರ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ.

* ಪ್ರತಿದಿನ ಸಂಜೆ 7.15ರಿಂದ ದೇಸೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss