ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟರ್ಕಿ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವ ಕಾರಣ ಮೃತರ ಸಂಖ್ಯೆ 21 ಸಾವಿರ ಗಡಿ ದಾಟಿದೆ. ಈ ನಡುವೆ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಸಿರಿಯಾ ವಿದ್ಯಾರ್ಥಿಗಳು, ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ತಮ್ಮ ಕುಟುಂಬಸ್ಥರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಟಡಿ ಇಂಡಿಯಾ ಕಾರ್ಯಕ್ರಮದಡಿ ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಸಿರಿಯಾ ಮೂಲದ 41 ವಿದ್ಯಾರ್ಥಿಗಳು, ತಮ್ಮ ಕುಟುಂಬಗಳು ಸುರಕ್ಷಿತವಾಗಿವೇ ಎಂಬ ಆತಂಕವನ್ನು ಎದುರಿಸುತ್ತಿದ್ದಾರೆ.
ಸಿರಿಯಾ ವಿದ್ಯಾರ್ಥಿಗಳು ಬುಧವಾರ ಸಂಜೆ ತಮ್ಮ ಕ್ಯಾಂಪಸ್‌ನಲ್ಲಿ ಒಗ್ಗಟ್ಟಿನ ಮೆರವಣಿಗೆ ಮಾಡಿದರು. 2019 ರಲ್ಲಿ ಪ್ರವೇಶ ಪಡೆದಿರುವ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ತಮ್ಮ ದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದು
ಹೇಳಿದರು.
“ನಾನು ಟಾರ್ಟಸ್ ಎಂಬ ನಗರದಿಂದ ಬಂದಿದ್ದೇನೆ, ಪೋಷಕರು ಡಮಾಸ್ಕಸ್, ಲಟಾಕಿಯಾ ಮತ್ತು ಟಾರ್ಟಸ್‌ನಲ್ಲಿ ಇದ್ದಾರೆ. ಭೂಕಂಪದ ಪರಿಣಾಮ ಲಟ್ಟಾಕಿಯಾ ಹಾನಿಗೊಳಗಾಗಿದ್ದು, ಬಹಳಷ್ಟು ಜನರು ಸತ್ತಿದ್ದಾರೆ ಅಥವಾ ಹೆಪ್ಪುಗಟ್ಟುವ ವಾತಾವರಣದಲ್ಲಿ ನಿರಾಶ್ರಿತರಾಗಿದ್ದಾರೆ. ನನ್ನ ಮಕ್ಕಳು ಅಲ್ಲಿದ್ದಾರೆ ಮತ್ತು ನಾನು ನಿಜವಾಗಿಯೂ ಚಿಂತೆಗೊಳಗಾಗಿದ್ದೇನೆ” ಎಂದು ನಸ್ರೀನ್ ಎಂಬ ಪಿಹೆಚ್‌ಡಿ ವಿದ್ಯಾರ್ಥಿನಿ ಹೇಳುತ್ತಾರೆ.
“ಫೆಬ್ರವರಿ 6ರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ನನ್ನ ದೇಶ ಸಿರಿಯಾದಲ್ಲಿ ಎದುರಾಗಿರುವ ಭೂಕಂಪದ ಸುದ್ದಿಯನ್ನು ಓದಿದೆ. ಭೂಕಂಪವು ಸುಮಾರು 7.8 ತೀವ್ರತೆಯ ಕಂಪನವಾಗಿತ್ತು. ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಭೂಕಂಪವಾಗಿದೆ. ಹೋಮ್ಸ್‌ನಲ್ಲಿರುವ ನನ್ನ ಸಹೋದರ ಮತ್ತು ಅವರ ಕುಟುಂಬದ ಬಗ್ಗೆ ಆತಂಕಗೊಂಡು, ನಾನು ಅವರಿಗೆ ವಿಚಾರಸಿದ್ದೇನೆ. ಅವರ ಕುಟುಂಬವು ಚೆನ್ನಾಗಿದೆ ಮತ್ತು ಆರೋಗ್ಯವಾಗಿದೆ. ಆದರೆ ಆ ಭೂಕಂಪವು ತುಂಬಾ ಪ್ರಬಲವಾಗಿದ್ದು, ಹೆಚ್ಚು ಆತಂಕ ಸೃಷ್ಟಿಸಿದೆ” ಎಂದು ಹಾಮ್ಸ್ ಮೂಲದ ಮುಹನ್ನದ್ ಡಾರ್ಕ್ ಅಲ್ಸೆಬಾಯಿ ಆತಂಕ ತೋಡಿಕೊಂಡಿದ್ದಾರೆ.