ಟಿ20: ಶ್ರೀಲಂಕಾ ವಿರುದ್ಧ ಭಾರತೀಯ ವನಿತೆಯರಿಗೆ ಎರಡನೇ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳೆಯರು ಶ್ರೀಲಂಕಾವನ್ನು ಎರಡನೇ ಟಿ20 ಪಂದ್ಯದಲ್ಲೂ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.
ಭಾರತೀಯ ಬೌಲರುಗಳು ಶ್ರೀಲಂಕಾವನ್ನು ಕೇವಲ 125 ರನ್‌ಗಳಿಗೆ ನಿಯಂತ್ರಿಸಿದ ಬಳಿಕ ಬ್ಯಾಟರ್‌ಗಳು 5 ವಿಕೆಟ್ ಕಳಕೊಂಡು 5 ಎಸೆತಗಳು ಬಾಕಿ ಇರುವಂತೆಯೆ ಗೆಲುವು ಸಾಧಿಸಲು ಶಕ್ತರಾದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ 31 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 39 ರನ್‌ಗಳ ಕೊಡುಗೆ ನೀಡಿದರು. ಶೆಫಾಲಿ ವರ್ಮಾ ಮತ್ತು ಮೇಘನಾ ತಲಾ 17 ರನ್‌ಗಳನ್ನು ಗಳಿಸಿದರು.
ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಮಹಿಳೆಯರು ಉತ್ತಮ ಆರಂಭಿಕ ಆಟ ಪ್ರದರ್ಶಿಸಿದ ಹೊರತಾಗಿಯೂ ಬಳಿಕ ಕುಸಿತ ಕಂಡರು.
ವಿಶ್ಮಿ ರಾಜಪಕ್ಷ ಮತ್ತು ಚಮರಿ ಅಟಪಟ್ಟು ಮೊದಲ ವಿಕೆಟಿಗೆ 13 ಓವರುಗಳಲ್ಲಿ 87 ರನ್ ಸೇರಿಸಿದರು. ಆದರೆ ಇವರಿಬ್ಬರ ಜತೆಯಾಟ ಕಡಿಯುವುದರೊಂದಿಗೆ ಭಾರತೀಯರು ಲಂಕಾದ ರನ್‌ಗತಿ ಮೇಲೆ ನಿಯಂತ್ರಣ ಹೇರಲು ಸಫಲರಾಗಿದ್ದರು.
ಬಳಿಕ ಭಾರತೀಯ ಬೌಲರುಗಳು ಶ್ರೀಲಂಕಾದ ವಿಕೆಟ್‌ಗಳನ್ನು ನಿಯಮಿತವಾಗಿ ಕೀಳುವ ಮೂಲಕ ಅವರ ಇನ್ನಿಂಗ್ಸನ್ನು 7 ವಿಕೆಟಿಗೆ 125ಕ್ಕೆ ಸೀಮಿತಗೊಳಿಸಿದರು. ದೀಪ್ತಿ ಶರ್ಮಾ 34ಕ್ಕೆ 2 ವಿಕೆಟ್ ಪಡೆದರು. ಪೂಜಾ ವಸ್ತ್ರಕಾರ್, ಹರ್ಮನ್‌ಪ್ರೀತ್ ಮತ್ತು ರಾಧಾ ಯಾದವ್ ಬಿಗು ಬೌಲಿಂಗ್ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!