ಮಹಿಳೆಯರ ಮೇಲೆ ನಿಷೇಧ ಹೇರಿದ ತಾಲೀಬಾನ್‌: ಅಪ್ಘಾನಿಸ್ತಾನದಲ್ಲಿ ಹಲವು ಸಹಾಯ ಕಾರ್ಯ ರದ್ದುಗೊಳಿಸಿದ ವಿಶ್ವಸಂಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಪ್ಘಾನಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲೀಬಾನ್‌ ಸರ್ಕಾರವು ಮಹಿಳೆಯರ ಮೇಲೆ ನಿಷೇಧ ಹೇರಿರುವುದನ್ನು ವಿರೋಧಿಸಿ ವಿಶ್ವಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದ್ದು ಅಪ್ಘಾನಿಸ್ತಾನದಲ್ಲಿ ಕೆಲವು “ಸಮಯ-ನಿರ್ಣಾಯಕ” ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದೆ. ಮತ್ತು ಮಹಿಳಾ ಸಹಾಯ ಕಾರ್ಯಕರ್ತರ ಮೇಲೆ ತಾಲಿಬಾನ್ ನೇತೃತ್ವದ ಆಡಳಿತದ ನಿಷೇಧದಿಂದಾಗಿ ಅನೇಕ ಇತರ ಚಟುವಟಿಕೆಗಳನ್ನು ಸಹ ವಿರಾಮಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಯುಎನ್ ನೆರವು ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್, ಯುಎನ್ ಏಜೆನ್ಸಿಗಳ ಮುಖ್ಯಸ್ಥರು ಮತ್ತು ಹಲವಾರು ಸಹಾಯ ಗುಂಪುಗಳು ಜಂಟಿ ಹೇಳಿಕೆಯಲ್ಲಿ ಮಹಿಳೆಯರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದಾರೆ.
“ಮಾನವೀಯ ಕೆಲಸದಿಂದ ಮಹಿಳೆಯರನ್ನು ನಿಷೇಧಿಸುವುದು ಎಲ್ಲಾ ಆಫ್ಘನ್ನರಿಗೆ ತಕ್ಷಣದ ಮಾರಣಾಂತಿಕ ಪರಿಣಾಮಗಳನ್ನು ಬೀರಲಿದೆ. ಮಹಿಳಾ ಸಿಬ್ಬಂದಿ ಕೊರತೆಯಿಂದ ಈಗಾಗಲೇ ಕೆಲವು ಸಮಯ-ನಿರ್ಣಾಯಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಹಿಳಾ ಕಾರ್ಯಕರ್ತರಿಲ್ಲದೇ ಮಾನವೀಯ ಸಹಾಯವನ್ನು ನೀಡಲು ಸಾಧ್ಯವಾಗದ ಕಾರಣ ಅನೇಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಮಾನವೀಯ ಸಮುದಾಯವಾಗಿ ಈಗ ಎದುರಿಸುತ್ತಿರುವ ಕಾರ್ಯಾಚರಣೆಯ ನಿರ್ಬಂಧಗಳನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಮಹಿಳಾ ಸಹಾಯ ಕಾರ್ಯಕರ್ತರ ಮೇಲಿನ ನಿಷೇಧವನ್ನು ಇಸ್ಲಾಮಿಸ್ಟ್ ತಾಲಿಬಾನ್ ನೇತೃತ್ವದ ಆಡಳಿತವು ಶನಿವಾರ ಘೋಷಿಸಿತು. ವಿಶ್ವವಿದ್ಯಾನಿಲಯಗಳಿಗೆ ಹಾಜರಾಗುವ ಮಹಿಳೆಯರ ಮೇಲೆ ಕಳೆದ ವಾರ ವಿಧಿಸಲಾದ ನಿಷೇಧದ ಬೆನ್ನಲ್ಲೇ ಈ ನಿಷೇಧ ಜಾರಿಗೊಳಿಸಲಾಗಿದೆ. ಮಾರ್ಚ್‌ನಲ್ಲಿ ಹೆಣ್ಣುಮಕ್ಕಳು ಪ್ರೌಢಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿತ್ತು.
ಮಹಿಳಾ ಸಿಬ್ಬಂದಿ ಇಲ್ಲದೆ ತಮ್ಮ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!