ಮಹಿಳೆಯರ ಶಿಕ್ಷಣ ಹಕ್ಕು ಮೊಟಕುಗೊಳಿಸಿದ ಬೆನ್ನಲ್ಲೇ, ಚಾಲನಾ ಪರವಾನಗಿಯನ್ನೂ ಕಿತ್ತುಕೊಂಡ ತಾಲೀಬಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲು ಏನೆಲ್ಲಾ ಸಾಧ್ಯವೋ ಆ ಎಲ್ಲಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಹಿಂದೆ ಮಹಿಳೆಯರ ಶಿಕ್ಷಣದ ಹಕ್ಕನ್ನು ನಿರಾಕರಿಸಿದ್ದ ಸರ್ಕಾರ, ಇದೀಗ ಮಹಿಳೆಯರು ವಾಹನ ಚಲಾಯಿಸುವ ಹಕ್ಕನ್ನು ಕಿತ್ತುಕೊಂಡಿದೆ. ಈ ಪ್ರಯತ್ನದ ಭಾಗವಾಗಿ ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುವ ಮೊದಲು ಮಹಿಳೆಯರು ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ನಿರ್ಭೀತಿಯಿಂದ ವಾಹನ ಚಲಾಯಿಸುತ್ತಿದ್ದರು. ಆದರೆ, ತಾಲಿಬಾನ್ ಈಗ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ವಿತರಿಸುವುದನ್ನು ನಿಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಆಫ್ಘನ್ ಸರ್ಕಾರದ ಪತನ ಮತ್ತು ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಹದಗೆಟ್ಟಿದೆ. ದೇಶದಲ್ಲಿ ಮಾನವ ಹಕ್ಕುಗಳ ಗಂಭೀರವಾದ ಉಲ್ಲಂಘನೆ ಪ್ರಕರಣಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿರುದ್ಧ ನಿರಂತರವಾಗಿ ನಡೆಯುತ್ತಿದೆ.
ಆಹಾರ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ದೇಶವು ವಿನಾಶಕಾರಿ ಮಾನವೀಯ ಬಿಕ್ಕಟ್ಟಿನಿಂದ ಬಳಲುತ್ತಿದ್ದರೂ ತಾಲೀಬಾನ್‌ ಸರ್ಕಾರ ತನ್ನ ಸಂಪೂರ್ಣ ಗಮನವನ್ನು ಮಹಿಳೆಯರನ್ನು ನಿಯಂತ್ರಣದಲ್ಲಿಡುವತ್ತಲೇ ಕೇಂದ್ರೀಕರಿಸಿಟ್ಟುಕೊಂಡಿದೆ ಎಂದು ಮಾಧ್ಯಮಗಳು ಟೀಕಿಸಿವೆ.
ಕೆಲದಿನಗಳ ಹಿಂದೆ ಅಫ್ಘಾನ್‌ ಮಹಿಳೆಯರು ಆರನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ವಿಶ್ವಾದ್ಯಂತ ಖಂಡನೆ ಕೇಳಿಬಂದಾಗ “ಶಿಕ್ಷಕರ ಕೊರತೆ” ಕಾರಣದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆರನೇ ತರಗತಿಯ ನಂತರ ಓದುವ ಆಸಕ್ತಿಯಿರುವ ಹುಡುಗಿಯರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವುದಾಗಿ ತಾಲೀಬಾನಿಗಳು ಹೇಳಿದ್ದರು.
ಅಫ್ಘಾನಿಸ್ತಾನ ವಿಶ್ವದಲ್ಲೇ ಅತಿ ಹೆಚ್ಚಿನ ಆಹಾರ ಕೊರತೆ ಬಿಕ್ಕಟ್ಟನ್ನು ಎದುರಿಸುತ್ತದೆ. ಶೇ.95 ಜನಸಂಖ್ಯೆ ಆಹಾರ ಕೊರತೆಯಿಂದ ಬಳಲುತ್ತಿದೆ ಎಂದು ಅಂದಾಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!