August 3, 2026
Monday, August 3, 2026
spot_img

ಬೆಳಗಾವಿಯಲ್ಲಿ ‘ತಾರುಣ್ಯ ಸಿಂಧು’ ಶಿಬಿರ: ಯುವತಿಯರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು

ಹೊಸದಿಗಂತ ವರದಿ ಬೆಳಗಾವಿ:

ಇಂದಿನ ಯುವತಿಯರು ರಾಷ್ಟ್ರದ ಉಜ್ವಲ ಭವಿಷ್ಯದ ನಿಜವಾದ ಶಿಲ್ಪಿಗಳಾಗಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವ, ಮಾತೃತ್ವ ಹಾಗೂ ಕರ್ತೃತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಉತ್ತಮ ಸಂಸ್ಕಾರ, ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯ ಭಾವನೆಯನ್ನು ಮೂಡಿಸುವ ಮಹತ್ಕಾರ್ಯ ಸಾಗಬೇಕಿದೆ. ಈ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ‘ತಾರುಣ್ಯ ಸಿಂಧು’ ಹೆಸರಿನ ವಿಶೇಷ ವ್ಯಕ್ತಿತ್ವ ವಿಕಾಸ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿಯ ಶಹಾಪುರದ ಶಾಸ್ತ್ರಿ ನಗರದಲ್ಲಿರುವ ‘ಗುಜರಾತ್ ಭವನ’ದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಹಾಗೂ ಉನ್ನತಿ ಟ್ರಸ್ಟ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಒಂದು ದಿನದ ವ್ಯಕ್ತಿತ್ವ ವಿಕಾಸ ಶಿಬಿರವನ್ನು ಭಾನುವಾರ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಮಿರಜಿ ಅವರು, “ಕಳೆದ 90 ವರ್ಷಗಳಿಂದ ಸೇವೆ ಮತ್ತು ಸಂಸ್ಕಾರಗಳ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅಖಿಲ ಭಾರತೀಯ ಮಹಿಳಾ ಸಂಘಟನೆಯಾದ ‘ರಾಷ್ಟ್ರ ಸೇವಿಕಾ ಸಮಿತಿ’ ಹಾಗೂ ‘ಉನ್ನತಿ ಟ್ರಸ್ಟ್’ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಯುವಶಕ್ತಿಯಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬುವುದು ಈ ಶಿಬಿರದ ಪ್ರಮುಖ ಆಶಯವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ:

ಶಿಬಿರದ ವೈಶಿಷ್ಟ್ಯಗಳ ಬಗ್ಗೆ ವಿವರಣೆ ನೀಡಿದ ಲಕ್ಷ್ಮೀ ಮಿರಜಿ ಅವರು, ದಿನಪೂರ್ತಿ ನಡೆಯುವ ಈ ಕಾರ್ಯಾಗಾರದಲ್ಲಿ ಯುವತಿಯರ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಪ್ರಚಲಿತ ವಿಷಯಗಳ ಕುರಿತು ಸಂವಾದ: ಆರೋಗ್ಯ ಮತ್ತು ಜೀವನಮೌಲ್ಯ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಿಕೆ ಹಾಗೂ ಜೀವನಮೌಲ್ಯಗಳ ಕುರಿತು ತಜ್ಞರಿಂದ ಮಾರ್ಗದರ್ಶನ.

ಸೃಜನಾತ್ಮಕ ಕಾರ್ಯಾಗಾರ: ಕೌಶಲ ಅಭಿವೃದ್ಧಿ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ.

ರಾಷ್ಟ್ರ ಚಿಂತನೆ: ರಾಷ್ಟ್ರಪ್ರೇಮ ಮತ್ತು ದೇಶಸೇವೆಯ ಭಾವನೆಗೆ ಪ್ರೇರಣೆ ನೀಡುವ ವಿಶೇಷ ಕಾರ್ಯಕ್ರಮಗಳು.

17 ರಿಂದ 35 ವರ್ಷದ ಯುವತಿಯರಿಗೆ ಸುವರ್ಣಾವಕಾಶ: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾರುಣ್ಯ ಸಿಂಧು ಸಂಯೋಜನಾ ಸಮಿತಿಯ ಸಂಯೋಜಕಿ ಪ್ರತಿಭಾ ಜೋಶಿ ಅವರು, “17 ರಿಂದ 35 ವರ್ಷದೊಳಗಿನ ಯುವತಿಯರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಯುವತಿಯರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸ, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಹಾಗೂ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಈ ಶಿಬಿರವು ಅತ್ಯುತ್ತಮ ವೇದಿಕೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಶಿಬಿರದಲ್ಲಿ ನೂರಾರು ಯುವತಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !