Monday, October 3, 2022

Latest Posts

ಬಿಜೆಪಿಗೆ ದ್ರೋಹ ಬಗೆದ ಉದ್ಧವ್ ಠಾಕ್ರೆಗೆ ಪಾಠ ಕಲಿಸಿ: ಕಾರ್ಯಕರ್ತರಿಗೆ ಅಮಿತ್ ಶಾ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶಿವಸೇನೆಯ ಉದ್ಧವ್ ಠಾಕ್ರೆ ಅವರು ಬಿಜೆಪಿಗೆ ದ್ರೋಹ ಬಗೆದಿದ್ದು, ಅವರಿಗೆ ಪಾಠ ಕಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈನಲ್ಲಿ ಕಾರ್ಯಕರ್ತರಿಗೆ ಕರೆನೀಡಿದ್ದಾರೆ. ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ʼನಾವು ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ದ್ರೋಹವಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಅವರ ಪಕ್ಷದಲ್ಲಿನ ಒಡಕು ಮತ್ತು ನಂತರದ ಘಟನೆಗಳಿಗೆ ಕಾರಣರಾಗಿದ್ದಾರೆ. ಅವರ ದುರಾಸೆ, ಏಕನಾಥ್ ಶಿಂಧೆಯವರ ಬಂಡಾಯವು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿದೆ. ಉದ್ಧವ್ ಠಾಕ್ರೆ ಅವರು ಬಿಜೆಪಿಗೆ ದ್ರೋಹ ಬಗೆದಿದ್ದಾರೆ. ಮಾತ್ರವಲ್ಲದೆ ತಮ್ಮ ಸಿದ್ಧಾಂತಕ್ಕೆ ದ್ರೋಹ ಮಾಡಿಕೊಂಡಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಜನರ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಶಾ ವಾಗ್ದಾಳಿ ನಡೆಸಿದ್ದಾರೆ. ಅವರ ಅಧಿಕಾರದ ದುರಾಸೆಯಿಂದ ಇಂದು ಅವರ ಪಕ್ಷ ಕುಗ್ಗಿದೆ. ʼನಾವು ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಭರವಸೆಯನ್ನು ಎಂದಿಗೂ ನೀಡಿರಲಿಲ್ಲ ಎಂಬ ವಿಚಾರವನ್ನು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಾವು ಬಹಿರಂಗವಾಗಿ ರಾಜಕೀಯ ಮಾಡುವ ಜನ, ಮುಚ್ಚಿದ ಕೋಣೆಗಳಲ್ಲಿ ಅಲ್ಲ ಎಂದು ಅಮಿತ್‌ ಶಾ ಪ್ರತಿಪಾದಿಸಿದ್ದಾರೆ.
ರಾಜಕೀಯದಲ್ಲಿ ಮೋಸ ಮಾಡುವವರಿಗೆ ಶಿಕ್ಷೆಯಾಗಬೇಕು. ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇದನ್ನು ಸಾಧಿಸಬಹುದು ಎಂದು ಅವರು  ಹೇಳಿದ್ದಾರೆ. “ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮತ್ತು ನಿಜವಾದ ಶಿವಸೇನೆ ಮೈತ್ರಿಕೂಟದ ಗುರಿ ಬಿಎಂಸಿ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದಾಗಿದೆ. ಸಾರ್ವಜನಿಕರು ಮೋದಿ ನೇತೃತ್ವದ ಬಿಜೆಪಿ ಜೊತೆಗಿದ್ದಾರೆ. ಸಿದ್ಧಾಂತಕ್ಕೆ ದ್ರೋಹ ಬಗೆದ ಉದ್ಧವ್ ಠಾಕ್ರೆ ಅವರ ಪಕ್ಷದೊಂದಿಗೆ ಅಲ್ಲ.ʼ ಅವರು ಹೇಳಿದ್ದಾರೆ.
2019 ರ ವಿಧಾನಸಭಾ ಚುನಾವಣೆಯ ನಂತರ, ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿತ್ತು. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿತು. ಕೆಲ ತಿಂಗಳ ಹಿಂದೆ ಏಕ್‌ ನಾಥ್‌ ಶಿಂದೆ ಅವರ ಬಣ ಶಿವಸೇನೆಯಿಂದ ಸಿಡಿದೆದ್ದು ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸನಿಹದಲ್ಲಿದ್ದು ಶಿವಸೇನೆಯ ಹಳೆಯ ಬಣ ಹಾಗೂ ಬಿಜೆಪಿ ನಡುವೆ ಪೈಪೋಟಿ ಆರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!