ದೇಶಕ್ಕಾಗಿ ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದ್ದ 20ರ ಯುವಕ ಉದಯ್ ಚಂದ್ ಜೈನ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉದಯ್ ಚಂದ್ ಜೈನ್.. ಈ ಹೆಸರಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಹೊತ್ತಿಗೆಯಲ್ಲಿ ದೊಡ್ಡ ಮೌಲ್ಯವಿದೆ. ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಧೀರ ಸ್ವಾತಂತ್ರ್ಯ ಹೋರಾಟಗಾರ ಉದಯ್ ಚಂದ್ ಜೈನ್. ಅವರು 1922 ರಲ್ಲಿ ಮಂಡ್ಲಾ ಜಿಲ್ಲೆಯ ಮಹಾರಾಜಪುರದಲ್ಲಿ ಜನಿಸಿದರು. ಉದಯ್ ಚಂದ್ ಜೈನ್ ಅವರ ತಂದೆ ತ್ರಿಲೋಕ್ ಚಂದ್ ಮತ್ತು ತಾಯಿ ಟಾಯ್ ಬಾಯಿ. ಉದಯ್ ಚಂದ್ ತಮ್ಮ 20ರ ಹರೆಯದಲ್ಲೇ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.
ಕ್ವಿಟ್ ಇಂಡಿಯಾ ಚಳವಳಿಯು ದೇಶದಾದ್ಯಂತ ಭುಗಿಲೆದ್ದಿತ್ತು. ಅದೇ ಸಮಯದಲ್ಲಿ 1942ರ ಆಗಸ್ಟ್ 8 ರಂದು ಮಂಡ್ಲಾದಲ್ಲಿ ಚಳುವಳಿ ಭುಗಿಲೆದ್ದಿತು ಮತ್ತು ಚಳವಳಿಗಾರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಟೆಲಿಗ್ರಾಫ್ ಮತ್ತು ರೈಲು ಮಾರ್ಗಗಳನ್ನು ಕತ್ತರಿಸಿ ಬ್ರಿಟೀಷ್‌ ಸಂಪರ್ಕ ವ್ಯವಸ್ಥೆಗಳನ್ನು ನಾಮಾವಶೇಷಗೊಳಿಸಲಾಯಿತು. ಚಳವಳಿಗಾರರ ದೊಡ್ಡ ನಾಯಕರನ್ನು ಬ್ರಿಟಿಷ್ ಸರ್ಕಾರ ಜೈಲಿಗೆ ಅಟ್ಟಿತು. ಪರಿಸ್ಥಿತಿ ಆಗ ತೀರಾ ಹದಗೆಟ್ಟಿತ್ತು. ಈ ಚಳವಳಿಯಲ್ಲಿ ವಿದ್ಯಾರ್ಥಿಗಳೂ ಸಹ ಹೊರಡುತ್ತಿದ್ದರು.
ಆಗಸ್ಟ್ 11, 1942 ರಂದು ಮಂಡ್ಲಾ ನಗರದ ಜಗನ್ನಾಥ ಹೈಸ್ಕೂಲ್ ವಿದ್ಯಾರ್ಥಿಗಳು ಶಾಲೆಯನ್ನು ಮುಚ್ಚಲು ಧರಣಿ ಕುಳಿತು ವಂದೇ ಮಾತರಂ ಅನ್ನು ಕೂಗಲು ಪ್ರಾರಂಭಿಸಿದರು. ಪ್ರತಿಭಟನಾಕಾರರ ಮೆರವಣಿಗೆಯು ಜಿಲ್ಲಾಧ್ಯಕ್ಷರ ಕಛೇರಿಯತ್ತ ಸಾಗುತ್ತಿತ್ತು. ಇದನ್ನು ತಡೆಯಲು ತಹಶೀಲ್ದಾರ ಫಾಕ್ಸ್ ನೇತೃತ್ವದಲ್ಲಿ ಸಶಸ್ತ್ರ ಪಡೆಗಳು ಸಿದ್ಧವಾಗಿದ್ದವು. ಮೆರವಣಿಗೆ ಮುಂದಕ್ಕೆ ಹೋದರೆ ಈ ಕ್ಷಣವೇ  ಗುಂಡು ಹಾರಿಸಬೇಕಾಗುತ್ತದೆ ಎಂದು ಮಕ್ಕಳಿಗೆ ಎಚ್ಚರಿಕೆ ನೀಡಲಾಯಿತು. ಈ ಎಚ್ಚರಿಕೆ ಕೇಳಿ ಕೆರಳಿದ ಉದಯ್ ಚಂದ್ ಜೈನ್ ತನ್ನ ಅಂಗಿಯ ಗುಂಡಿಗಳನ್ನು ಕಳಚಿ ಗುಂಡು ಹಾರಿಸಂತೆ ಇಂಗ್ಲೀಷರಿಗೆ ಸವಾಲು ಒಡ್ಡಿದ. ಕ್ರೂರಿ ಬ್ರಿಟೀಷರು ಒಂದಿನಿತೂ ಯೋಚಿಸಲದೆ ಆತನ ಮೇಲೆ ಗುಂಡು ಹಾರಿಸಿದರು. ಅದು ನೇರವಾಗಿ ಆತನ ಹೊಟ್ಟೆಗೆ ಬಂದು ಬಿದ್ದು ಚಂದ್‌ ನಿಂತಲ್ಲೇ ನೆಲಕುರುಳಿದ. ಉದಯ್ ಚಂದ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆತನ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಗಸ್ಟ್ 16,  1942 ರಂದು ಚಾಂದ್‌ ನಿಧನರಾದರು. ಉದಯ್ ಚಂದ್ ಜೈನ್ ಭಾರತೀಯ ರಾಷ್ಟ್ರೀಯ ಚಳುವಳಿಯ ಹುತಾತ್ಮ ಯೋಧ ಎನಿಸಿಕೊಂಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!