Saturday, February 4, 2023

Latest Posts

ಸ್ನೇಹಿತನಿಂದಲೇ ವಂಚನೆಗೊಳಗಾದ ಟೀಂ ಇಂಡಿಯಾ ವೇಗಿ ಉಮೇಶ್​ ಯಾದವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಟೀಂ ಇಂಡಿಯಾ ವೇಗಿ ಉಮೇಶ್​ ಯಾದವ್ ಗೆ ​ತನ್ನ ಸ್ನೇಹಿತನಿಂದಲೇ ವಂಚನೆಯಾಗಿದ್ದು, ಇದೀಗ ಬೆಳಕಿಗೆ ಬಂದಿದೆ.

ತನ್ನ ಸ್ನೇಹಿತನ ಆಸ್ತಿ ಖರೀದಿ ವಿಚಾರವಾಗಿ 44 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಕೊರಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶಿವಾಜಿ ನಗರದಲ್ಲಿ ವಾಸವಾಗಿರುವ ಉಮೇಶ್ ಯಾದವ್ ತನ್ನ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳಲು ಶೈಲೇಶ್ ದತ್ತಾ ಠಾಕ್ರೆ ಎಂಬಾತನನ್ನು 2014ರಲ್ಲಿ ನೇಮಿಸಿಕೊಂಡಿದ್ದರು. ಪರಿಚಯಸ್ಥ ಹಾಗೂ ನೆರೆಮನೆಯಾತ ಎಂಬ ಕಾರಣಕ್ಕಾಗಿ ಉಮೇಶ್ ಯಾದವ್ ಶೈಲೇಶ್​ಗೆ ಮಹತ್ವದ ಜವಾಬ್ದಾರಿ ವಹಿಸಿದ್ದರು. ಆದರೆ ಶೈಲೇಶ್ ನಂಬಿಕೆ ದ್ರೋಹ ಮಾಡಿದ್ದಾನೆ.

ವರದಿಯ ಪ್ರಕಾರ ಉಮೇಶ್ ಯಾದವ್ ಕೊರಾಡಿ ಎಂಬಲ್ಲಿ ಇರುವ ಎಂಎಸ್‌ಇಬಿ ಕಾಲೋನಿಯಲ್ಲಿ ಸ್ಥಿರಾಸ್ತಿ ಖರೀದಿಸುವ ಸಲುವಾಗಿ ಶೈಲೇಶ್ ದತ್ತಾ ಖಾತೆಗೆ 44 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ಆದರೆ ಶೈಲೇಶ್ ಕೊನೆ ಹಂತದಲ್ಲಿ ಉಮೇಶ್ ಯಾದವ್​ಗೆ ಗೊತ್ತಾಗದಂತೆ ತನ್ನ ಹೆಸರಿಗೆ ಜಾಗವನ್ನು ಬರೆಸಿಕೊಂಡಿದ್ದಾನೆ.

ಶೈಲೇಶ್ ತನ್ನ ಹೆಸರಿಗೆ ಆಸ್ತಿ ಬರೆಸಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಉಮೇಶ್​ ಯಾದವ್ ಹಣ ಹಿಂತಿರುಗಿಸುವಂತೆ ಹೇಳಿದ್ದಾರೆ. ಆದರೆ ಶೈಲೇಶ್ ಮಾತ್ರ ಆಸ್ತಿ ಮತ್ತು ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾನೆ. ಈ ಬಗ್ಗೆ ಉಮೇಶ್ ಯಾದವ್ ಪೊಲೀಸ್ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಕೊರಾಡಿ ಪೊಲೀಸರು ಶೈಲೇಶ್ ವಿರುದ್ಧ ಐಪಿಸಿ ಸೆಕ್ಷನ್ 406, 420 ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!