ಇಂಟರ್ನೆಟ್​ ನೋಡಿ ಬಾಂಬ್ ತಯಾರಿಸಿ ಶಾಲೆ ಮೇಲೆ ಎಸೆದ ಪುಂಡ ವಿದ್ಯಾರ್ಥಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನ ಹಿಂದೆ ಪ್ರತಿಷ್ಠಿತ ಶಾಲೆಯ ಹೊರಗೆ ಬಾಂಬ್‌ಗಳನ್ನು ಎಸೆಯಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಶಾಕಿಂಗ್‌ ವಿಚಾರಗಳನ್ನು ಪತ್ತೆಹಚ್ಚಿದ್ದಾರೆ.
ನಗರದಲ್ಲಿ ನಡೆದ ಕನಿಷ್ಠ ಆರು ಬಾಂಬ್ ದಾಳಿ ಘಟನೆಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಭಾಗಿಯಾಗಿರುವುದನ್ನು ಪ್ರಯಾಗರಾಜ್ ಪೊಲೀಸರು ಪತ್ತೆ ಹಚ್ಚಿದ್ದಾರೆ.ವಿದ್ಯಾರ್ಥಿಗಳು ಆನ್‌ಲೈನ್ ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಬಾಂಬ್ ತಯಾರಿಕೆಯನ್ನು ಕಲಿತಿದ್ದಾರೆ. ಅವರು ತಮ್ಮ ಗುಂಪಿನ ಪ್ರಾಬಲ್ಯವನ್ನು ಸಾಬೀತುಪಡಿಸಲು ಮೂರು ಪ್ರಮುಖ ಕಾನ್ವೆಂಟ್ ಶಾಲೆಗಳ ಗೇಟ್‌ಗಳ ಹೊರಗೆ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಮಾತ್ರವಲ್ಲ, ಸಾಮಾಜಿಕ ತಾಣಗಳಲ್ಲಿ ತಮ್ಮ ಕೃತ್ಯದ ವೀಡಿಯೊಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ.ಈ ವಿದ್ಯಾರ್ಥಿಗಳು ತಮ್ಮ ಗ್ಯಾಂಗ್‌ಗಳು ಮತ್ತು ವಾಟ್ಸಾಪ್ ಗ್ರೂಪ್‌ ಗಳಿಗೆ ತಾಂಡವ್, ಜಾಗ್ವಾರ್, ಟೈಗರ್, ಇಮ್ಮಾರ್ಟಲ್ ಮತ್ತು ರಂಗಬಾಜ್ ಮುಂತಾದ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.
“ಶಾಲೆಯಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ಆವೇಶದಲ್ಲಿ ಹುಡುಗರು ಬಾಂಬ್‌ಗಳನ್ನು ಎಸೆದಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರ ಪೊಲೀಸರು ಮೂರು ದಿನಗಳ ಹಿಂದೆ ಸಿಸಿಟಿವಿ ದೃಶ್ಯಗಳ ಸಹಾಯದಿಂದ 11 ವಿದ್ಯಾರ್ಥಿಗಳನ್ನು ಬಂಧಿಸಿ ಅವರ ವಿರುದ್ಧ ಐಪಿಸಿ ಮತ್ತು ಸ್ಫೋಟಕ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಮೂರು ವಿಭಿನ್ನ ಕಾನ್ವೆಂಟ್ ಶಾಲೆಗಳಿಗೆ ಸೇರಿದ ಈ ವಿದ್ಯಾರ್ಥಿಗಳು ತಮ್ಮ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸುವ ಸ್ಪರ್ಧೆಯಲ್ಲಿದ್ದರು. ಅದಕ್ಕಾಗಿ ಪ್ರತಿಸ್ಪರ್ಧಿ ಶಾಲೆಯ ಗೇಟ್ ಗಳ ಬಳಿ ಬಾಂಬ್‌ಗಳನ್ನು ಎಸೆದಿದ್ದಾರೆ. ಇಂಟರ್ನೆಟ್‌ ನೋಡಿ ಪಟಾಕಿಯಲ್ಲಿನ ಸ್ಪೋಟಕಗಳನ್ನು ಹೊರತೆಗೆದು ಅದಕ್ಕೆ ಗಾಜು, ಇಟ್ಟಿಗೆ ಪುಡಿ ಇತ್ಯಾದಿಗಳನ್ನು ಬೆರೆಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರ ಬಳಿಯಿದ್ದ ಎರಡು ದ್ವಿಚಕ್ರವಾಹನಗಳು, 10 ಮೊಬೈಲ್ ಫೋನ್‌ಗಳು ಮತ್ತು ಎರಡು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಬ್ಬ ಅಪ್ರಾಪ್ತನನ್ನು ಜೈಲಿಗೆ ಕಳುಹಿಸಿದರೆ, ಉಳಿದವರನ್ನು ಬಾಲಾಪರಾಧಿ ಗೃಹಗಳಿಗೆ ಕಳುಹಿಸಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೊದಲ ಬಾಂಬ್ ಸ್ಫೋಟದ ಘಟನೆ ವರದಿಯಾಗಿತ್ತು. ನಂತರ, ಜುಲೈ 4, 15, 16, 22 ಮತ್ತು 25 ರಂದು ಇತರ ಶಾಲೆಗಳ ಹೊರಗೆ ಇದೇ ರೀತಿಯ ಘಟನೆಗಳು ವರದಿಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!