ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. ನೀಟ್-ಯುಜಿ ಮರುಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ತೆಗೆದುಕೊಳ್ಳಲಾದ ಈ ನಿರ್ಧಾರ ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಅನುಮಾನಗಳ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೂ.22ರವರೆಗೆ ಟೆಲಿಗ್ರಾಂ ಸೇವೆಯನ್ನು ನಿರ್ಬಂಧಿಸಲಾಗಿದ್ದು, ಜೂನ್ 30ರವರೆಗೆ ಅದರ ಕೆಲವು ಪ್ರಮುಖ ವೈಶಿಷ್ಟ್ಯಗಳ ಮೇಲೂ ನಿರ್ಬಂಧ ಹೇರಲಾಗಿದೆ.
ಕಳೆದ ಕೆಲವು ವಾರಗಳಿಂದ ಟೆಲಿಗ್ರಾಂನಲ್ಲಿ NEET Paper Leak, Re-NEET 2026 ಮತ್ತು ಇತರ ಅನುಮಾನಾಸ್ಪದ ಚಾನೆಲ್‌ಗಳು ಭಾರೀ ಪ್ರಮಾಣದಲ್ಲಿ ಸಕ್ರಿಯವಾಗಿದ್ದವು. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಲಭ್ಯವಿದೆ ಎಂದು ಹೇಳಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆದಿರುವ ಬಗ್ಗೆ ಎನ್‌ಟಿಎಗೆ ಮಾಹಿತಿ ಲಭ್ಯವಾಗಿತ್ತು. ಇದರ ಜೊತೆಗೆ ಟೆಲಿಗ್ರಾಂನ ಮೆಸೇಜ್ ಎಡಿಟ್ ಮಾಡುವ ವ್ಯವಸ್ಥೆಯ ದುರ್ಬಳಕೆ ಬಗ್ಗೆ ಕೂಡ ಆತಂಕ ವ್ಯಕ್ತವಾಗಿತ್ತು. ಈಗಾಗಲೇ ಕಳುಹಿಸಿದ ಸಂದೇಶವನ್ನು ನಂತರ ಬದಲಾಯಿಸಿ, ಪ್ರಶ್ನೆಪತ್ರಿಕೆ ಮುಂಚಿತವಾಗಿ ಸಿಕ್ಕಿತ್ತು ಎಂಬ ರೀತಿಯ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ವೈಶಿಷ್ಟ್ಯವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಇದನ್ನೂ ಓದಿ:
ಕಳೆದ ವರ್ಷ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಂದ ದೇಶವ್ಯಾಪಿ ವಿವಾದಕ್ಕೆ ಕಾರಣವಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಇದೇ ಹಿನ್ನೆಲೆ ಈ ಬಾರಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ.
ಜೂ.21ರಂದು ನಡೆಯಲಿರುವ ಮರುಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದರೆ ತಕ್ಷಣವೇ ದೂರು ನೀಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎನ್‌ಟಿಎ ಮನವಿ ಮಾಡಿದೆ. ಇದಕ್ಕಾಗಿ ವಿಶೇಷ ದೂರು ಪೋರ್ಟಲ್ ಕೂಡ ತೆರೆಯಲಾಗಿದೆ.



