May 28, 2026
Thursday, May 28, 2026
spot_img

ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ: ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯ ಬಿಜೆಪಿ ರಿಯಾಕ್ಷನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಈ ಮೂಲಕ ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ. ಈ ಸರಕಾರದ ಮೂರು ವರ್ಷಗಳ ಸಾಧನೆ ಎಂದರೆದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ ಎಂದು ಟೀಕಿಸಿದೆ.

ಈ ಸರಕಾರ ಮೂರು ವರ್ಷ ಅಭಿವೃದ್ಧಿಯನ್ನು ಸಂಪೂರ್ಣ ನಿಲ್ಲಿಸಿ, ಕಲೆಕ್ಷನ್‌-ಕರಪ್ಷನ್‌-ಕಮಿಷನ್‌ನಲ್ಲಿಯೇ ಕಳೆದರು. ಇದೀಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ ಎಂದು ಟೀಕಿಸಿದೆ.

ನಯಾಪೈಸೆ ಪ್ರಯೋಜನ ಇಲ್ಲ

ಇಲ್ಲಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ ಎಂದು ಹೇಳಿದೆ.

ಎರಡೇ ಅಜೆಂಡಾ

ಕರ್ನಾಟಕ ಸಂಪೂರ್ಣ ದಿವಾಳಿ ಹಾಗೂ ಕಾಂಗ್ರೆಸ್‌ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ ಎಂದು ಬಿಜೆಪಿ ಅಸಮಾಧಾನ ಹೊರಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !