ಹೊಸದಿಗಂತ ವರದಿ ಸಕಲೇಶಪುರ:
ಸಕಲೇಶಪುರ ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸ್ಕ್ಯಾನಿಂಗ್ ಸೌಲಭ್ಯ ಸಮರ್ಪಕವಾಗಿ ಲಭ್ಯವಿಲ್ಲದೆ ಪರದಾಡುತ್ತಿದ್ದ ಬಡ ರೋಗಿಗಳು ಹಾಗೂ ಗರ್ಭಿಣಿಯರ ಸಮಸ್ಯೆಗೆ ಶಾಸಕ ಸಿಮೆಂಟ್ ಮಂಜು ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ಅರ್ಹ ರೋಗಿಗಳಿಗೆ ಪಟ್ಟಣದ ಲೀಲಾವತಿ ಆಸ್ಪತ್ರೆಯಲ್ಲಿ ಉಚಿತವಾಗಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರದ ಸಮಸ್ಯೆಯಿಂದಾಗಿ ಹಲವು ವರ್ಷಗಳಿಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಲೆನಾಡು ಭಾಗದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಪರೀಕ್ಷೆಗೆ ತಗಲುವ ವೆಚ್ಚ ಭರಿಸುವುದು ಅನೇಕ ಕುಟುಂಬಗಳಿಗೆ ಹೊರೆಯಾಗಿತ್ತು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕ ಸಿಮೆಂಟ್ ಮಂಜು, ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ವಿಧಾನಸಭೆಯಲ್ಲಿಯೂ ಈ ಕುರಿತು ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದರು. ಆದರೂ ಸ್ಕ್ಯಾನಿಂಗ್ ಯಂತ್ರ ಹಾಗೂ ಅಗತ್ಯ ಸಿಬ್ಬಂದಿ/ಆಪರೇಟರ್ ವ್ಯವಸ್ಥೆ ವಿಳಂಬವಾಗಿತ್ತು. ಮತ್ತೊಂದೆಡೆ ತಾಲೂಕಿನ ವಿವಿಧ ಸಂಘಟನೆಗಳೂ ಸ್ಕ್ಯಾನಿಂಗ್ ಸೇವೆ ಆರಂಭಿಸುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದವು.
ಇದನ್ನೂ ಓದಿ:
ಸರ್ಕಾರಿ ಮಟ್ಟದಲ್ಲಿ ಶಾಶ್ವತ ವ್ಯವಸ್ಥೆ ಜಾರಿಯಾಗುವವರೆಗೆ ಬಡ ರೋಗಿಗಳು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಶಾಸಕ ಸಿಮೆಂಟ್ ಮಂಜು ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದಾರೆ. ಪಟ್ಟಣದ ಲೀಲಾವತಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಕ್ರಾಫರ್ಡ್ ಆಸ್ಪತ್ರೆಗೆ ಬರುವ ಸ್ಕ್ಯಾನಿಂಗ್ ಅಗತ್ಯವಿರುವ ರೋಗಿಗಳು ಹಾಗೂ ಗರ್ಭಿಣಿಯರಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಲೀಲಾವತಿ ಆಸ್ಪತ್ರೆಯಲ್ಲಿ ಈ ಉಚಿತ ಸ್ಕ್ಯಾನಿಂಗ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, “ಬಡವರು ಹಾಗೂ ಕೂಲಿ ಕಾರ್ಮಿಕರು ಹಣದ ಕೊರತೆಯಿಂದ ಸ್ಕ್ಯಾನಿಂಗ್ ಪರೀಕ್ಷೆಯಿಂದ ವಂಚಿತರಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲೇ ಶಾಶ್ವತ ಸ್ಕ್ಯಾನಿಂಗ್ ವ್ಯವಸ್ಥೆ ಆರಂಭವಾಗುವವರೆಗೆ ತಾತ್ಕಾಲಿಕವಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಾಫರ್ಡ್ ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಸರ್ಕಾರಿ ವ್ಯವಸ್ಥೆಯಲ್ಲಿನ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಆಸ್ಪತ್ರೆಯ ಸಹಕಾರ ಪಡೆದು ಉಚಿತ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಿರುವ ಶಾಸಕರ ಕ್ರಮದಿಂದ ಬಡ ರೋಗಿಗಳು ಹಾಗೂ ಗರ್ಭಿಣಿಯರಿಗೆ ಅನುಕೂಲವಾಗಲಿದೆ.



