October 12, 2026
Monday, October 12, 2026
spot_img

ಭೀಕರ ರಸ್ತೆ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ತಮಿಳುನಾಡಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಇಡೀ ದೇಶವನ್ನೇ ಕಂಗೆಡಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ತಮಿಳುನಾಡು ಮೂಲದ ಎಂಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.‌

ತಡರಾತ್ರಿ ಜವರಾಯನ ಅಟ್ಟಹಾಸ

ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ತಡರಾತ್ರಿ ಸುಮಾರು 11:40ರ ವೇಳೆಗೆ ತ್ರಿಶೂರ್ ಬಳಿಯ ಕೈಪಮಂಗಲಂನ ಪನಂಬಿಕ್ಕುನ್ನು ಎಂಬಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ನೋಂದಣಿಯ ಕಾರು ಗುರುವಾ ಯೂರಿನಿಂದ ಕೊಡುಂಗಲ್ಲೂರು ಕಡೆಗೆ ಚಲಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಡೈವರ್ಷನ್ ಬಳಿ ನಿಲ್ಲಿಸಲಾಗಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಹೇಳಲಾಗುತ್ತದೆ.

ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ

ಅಪಘಾತದ ಸದ್ದಿಗೆ ಓಡಿ ಬಂದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ನಜ್ಜುಗುಜ್ಜಾಗಿದ್ದ ಕಾರಿನ ಭಾಗಗಳನ್ನು ಕತ್ತರಿಸಿ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ವಿದ್ಯಾರ್ಥಿಗಳ ಗುರುತು ಪತ್ತೆ ಬಾಕಿ

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್ ವೈದ್ಯಕೀಯ ಕಾಲೇಜುಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇವರೆಲ್ಲರೂ ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ಅವರ ಪೂರ್ಣ ವಿವರ ಹಾಗೂ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ:

ಪೊಲೀಸ್ ತನಿಖೆ

ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆಯಲು ನಿಖರ ಕಾರಣವೇನು? ಚಾಲಕನಿಗೆ ನಿದ್ದೆಯ ಮಂಪರು ಇತ್ತೇ ಅಥವಾ ರಸ್ತೆಯ ತಿರುವಿನಲ್ಲಿ ಲಾರಿ ಕಾಣಿಸದೇ ಈ ಅಪಘಾತ ಸಂಭವಿಸಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Must Read